ಗುರುವಾರ, ಸೆಪ್ಟೆಂಬರ್ 27, 2012

ಬಾನೆಲ್ಲೋ............ಭುವಿಯಲ್ಲೋ...............




ಅದ್ಯಾಕೋ ಮತ್ತೆ ಅನಾಥ ಭಾವ ಕಾಡುತ್ತಿದೆ. ಮಾನಸ ಮಿಲನವಿಲ್ಲದೇ ಏಕಾಂತ ನನ್ನನ್ನ ಮತ್ತೆ ಮತ್ತೆ ಅಣುಕಿಸುತ್ತಿದೆ. ದಿಕ್ಕುದೆಸೆಯಿಲ್ಲದ ಪಯಣಕ್ಕೆ ಗುರಿಯೇ ಅಸ್ಪಷ್ಟವಾಗುತ್ತಿದೆ. ಮಂಜು ಮುಸುಕಿದ ಮೋಡದಂತೆ ತಣ್ಣಗಾಯಿತು ಎನ್ನುವಷ್ಟರಲ್ಲಿ, ಬೂದಿ ಮುಚ್ಚಿದ ಕೆಂಡದಂತೆ ಆಸ್ಫೋಟಗೊಳ್ಳುತ್ತಲೇ ನನ್ನನ್ನ ಕಾಡುವುದೇ ಅದಕ್ಕೆ ರಕ್ಕಸಾನಂದವಾಗಿಸಿಬಿಟ್ಟಿದೆ. ಅರಿವಿಲ್ಲದೇ ನನ್ನನ್ನ ಖಿನ್ನತೆಗೆ ದೂಡುತ್ತಿರುವುದಲ್ಲದೇ, ಮನಸ್ಸನ್ನ ನಿಮಿಷದಲ್ಲೇ ಮಸಣವಾಗಿಸಿಬಿಡುವ ರಣಭಾವದ ರೌದ್ರ ನರ್ತನ ಎದೆಯಲ್ಲಿ. ದೂರವಾದವರ ನೆನಪು ದುರಂತಕ್ಕೆ ಸಾಕ್ಷಿಯೆಂಬಂತೆ ಮನಕ್ಕಪ್ಪಳಿಸಿ, ನನ್ನನ್ನ ಮೂದಲಿಸಿ ಸಾಯಿಸಿ ನೋಯಿಸುವ ವಿರಹಿ ನೋವಿಗೆ ಕೊನೆ ಹಾಡಲೆಂತೋ ಕಾಣೆ...
          ನಾನೇನೋ ಕಳೆದುಕೊಂಡೆನಾ ಅಂತ ಪ್ರಶ್ನಿಸಿಕೊಂಡರೆ, ಕಳೆದುಕೊಳ್ಳುವಂತಹದ್ದನ್ನ ನಾನು ಪಡೆಯಲೇ ಇಲ್ಲ. ಭಾವನೆಗಳ ಹುಚ್ಚು ಆವೇಶ ಅಂಥದ್ದೊಂದು ಭ್ರಮಾಲೋಕ ಸೃಷ್ಟಿಗೆ ಕಾರಣವಾಯ್ತಾ? ಅದನ್ನ ಭ್ರಮೆ ಅಂತ ಕರೆಯುವುದಾದರೂ ಹೇಗೆ. ಒಮ್ಮೆ ಅದು ಭ್ರಮೆ ಅನ್ನಿಸಿದ ಮೇಲೆ ಅದೇ ಭ್ರಮೆ ಮತ್ತೆ ಮೂಡಲಾರದು. ಹೀಗಾಗಿಯೇ ಅದು ಭ್ರಮೆಯಂತೂ ಅಲ್ಲ ಎಂದೆನ್ನಿಸಿದ್ರೂ ಭ್ರಮೆ ಎಂದೇ ಭಾವಿಸಿ, ಅನವಶ್ಯಕ ಭಾವನೆಗಳನ್ನ ಬಲಿಕೊಡುವುದೇ ಒಳಿತು ಎನ್ನಿಸಿದೆ. ಗತಿಸಿಹೋದುದ್ದಕ್ಕೆ ಚಿಂತಿಸಿ ಫಲವಿಲ್ಲ ನಿಜ, ಗತಿಸೋಕು ಮುನ್ನವೂ ಫಲಾಪೇಕ್ಷೆ ಇರಲೇ ಇಲ್ಲ ಅನ್ನೋದು ಅಷ್ಟೇ ಸತ್ಯ.
          ಮನದ ಹೊಸಿಲು ದಾಟಿ, ಮತ್ತೊಂದು ಕನಸಿನ ಹೊಸಿಲನ್ನ ಮೆಟ್ಟಿಯಾಗಿದೆ. ಮರೆತವಳ ಮನಸ್ಸೆಂದು ಮಂದಾರವಾಗಲಾರದು. ಮತ್ಯಾಕೆ ಮನದ ಬನದಲ್ಲಿ ನಿತ್ಯವೂ ಭಾವ ಪಸರಿಸೋದು? ಎಂಥ ಮಳೆ ಸುರಿದರೂ ಭಾವಬೀಜ ಮೊಳಕೆ ಒಡೆಯೋದಿಲ್ಲ. ನಂದನವನ ಆಗೋದಿಲ್ಲ, ಇನ್ನೇನಿದ್ದರೂ ಅರಣ್ಯರೋದನವಷ್ಟೇ............... ಮತ್ತೆ ಭಾವಾತಿರೇಕದಿಂದ ಬೆಂದ ಬೆಂಗಾಡಾಗಿದೆ ನನ್ನೆದೆ. ಭುವಿಯ ಏಕಾಂತತೆ,,,, ಮುಗಿಲಿನ ಅನಂತತೆ,,, ಒಬ್ಬರನ್ನೊಬ್ಬರು ನೋಡಿ ಸಮಾಧಾನವಾದಂತೆ. ಭುವಿಯ ಹಸಿರ ಸಿರಿಗೆ ಕಾದಿರುವುದು ಮನ.