ಶುಕ್ರವಾರ, ಡಿಸೆಂಬರ್ 5, 2014

ಅನಿವಾರ್ಯತೆ ಆಳುವಾಗ..ಬದುಕು ತೃಣಮಾತ್ರ...!!!

ಮನದ ಮೂಲೆಯಲ್ಲಿ ಮುನಿಸಿಕೊಂಡು ಮುದುಡಿರುವ ಭಗ್ನ ಕನಸುಗಳು ಆಗಾಗ ಜೀವ ತಾಳುತ್ತಿವೆ. ಅರೆಕ್ಷಣ ನೆನಪಾಗಿ ಮರುಕ್ಷಣ ಮರೆತಂತಾಗುವ ಕನಸುಗಳು ನೆನಪಾಗದೇ ಇರೋದೂ ಇಲ್ಲ. ಅಂತಹ ಕನಸುಗಳು ಮತ್ಯಾವಗಲೋ ನೆನಪಾದಾಗ ಮನಸ್ಸಿಗೆ ಸಣ್ಣ ಘಾತ, ಆತಂಕ. ಎಲ್ಲೋ ಹೋಗಿ ಎಲ್ಲೋ ಸೇರಬೇಕಿದ್ದ ಬದುಕಿನ ಹಾದಿ ಬದಲಾಗಿದೆ. ಬದಲಾವಣೆಯ ಸುಳಿವನ್ನೂ ನೀಡದೇ, ಬದುಕು ತನ್ನಿಷ್ಟದ ಮಂಕುಲಲ್ಲಿ ತಿರುವುತ್ತಾ, ಕಷ್ಟದ ಗುಡ್ಡಗಳನ್ನೂ ಅನಾಯಾಸಾವಾಗಿ ಹತ್ತಿಸುತ್ತಾ, ಪ್ರಪಾತಗಳಂಚಿನಲ್ಲೂ ಕೈಹಿಡಿದು ಸಾಗಿಸುತ್ತಿದೆ. ಬಯಲ ಬರಡು ಭೂಮಿಯಿಂದ ಪಯಣ ಹೊರಟರೂ ಅಚ್ಚ ಹಸುರಿನಿಂದ ಕಂಗೊಳಿಸುವ ನಾಡಿನವರೆಗೂ ಸಾಗಿಬಂದಿದೆ. ಅಷ್ಟೇ ಹಸಿರಾಗಿರುವ ನೆನಪುಗಳ ಮೂಟೆ ಹೊತ್ತು... ಇನ್ನು ಸಾಕೆನಿಸಿದರೂ ಬೇಕೆನಿಸುವ ಮನದಂಬಲಕ್ಕೆ ಕೊನೆಯಿಲ್ಲ. ಹೊಸ ಕನಸುಗಳ ಹುಡುಕಾಟ, ಕಮರಿಹೋಗಿರುವ ಹಳೆ ಕನಸುಗಳ ಗೋಳಾಟ, ಮಧ್ಯದಲ್ಲಿ ನಿಂತು ದಿಕ್ಕು ತೋಚದಂತಾಗಿರುವ ಹೊತ್ತಲ್ಲೇ ಬದುಕು ಮತ್ತೊಂದು ಮಗ್ಗುಲಿಗೆ ವಾಲುತ್ತಿದೆ. ಬಂಧನದ ಬೇಡಿ ಬೆಸೆಯುವ ಅವಸರ ಮನಸ್ಸಿಗೆ ಇನ್ನಿಲ್ಲದ ಕಿರಿಕಿರಿ ಅನ್ನಿಸುತ್ತಿದೆ. ಬದುಕನ್ನ ಅನಿವಾರ್ಯತೆಯ ಕೈಗಿಟ್ಟು ಸಾಗಲೇಬೇಕಾದ, ನಿರ್ಧರಿಸಲೇಬೇಕಾದ ಅಸಹಾಯಕತೆ ಮನಸ್ಸನ್ನ ಹಿಂಸಿಸುತ್ತಿದೆ. ಜೀವನದಲ್ಲೊಮ್ಮೆ ಬರುವ, ಖುಷಿ ತರುವ ಈ ಶುಭಘಳಿಗೆಯನ್ನ ಇಷ್ಟೊಂದು ಒಲ್ಲದ ಮನಸ್ಸಿನಿಂದ ಸ್ವಾಗತಿಸಬೇಕಾಗುತ್ತದೆ ಎನ್ನುವ ಕಲ್ಪನೆ ಕಿಂಚಿತ್ತೂ ಇರಲಿಲ್ಲ. ಬಹುಷ ನಾನಂದುಕೊಂಡಿದ್ದು ನಿಜವಾಗಿದ್ದರೆ ಹೀಗಾಗುತ್ತಿರಲಿಲ್ಲ. ನನ್ನೀ ನೋವಿಗೆ ನಾನೆ ಹೊಣೆಗಾರ, ಬೇರೆಯವರನ್ನ ದೂಷಿಸುವುದೂ ನನಗತ್ಯವಿಲ್ಲ. ಅನ್ಯರ ಅನುಕಂಪವೀಗ ವಾಕರಿಕೆ..!
ನಾವು ಅಂದುಕೊಂಡ ಹಾದಿಯಲ್ಲಿ ಸಾಗಲು ಆಗಿಲ್ಲ ಅಂದ್ರೆ ಬದುಕು ಕರೆದೊಯ್ಯುವ ಹಾದಿಯಲ್ಲೇ ಸಾಗಬೇಕೆಂಬ ಸಾಲುಗಳಿಲ್ಲ ಹೆಚ್ಚು ಅರ್ಥ ನೀಡುವುದು ಇದೇ ಕಾರಣಕ್ಕೆ. ನೀ ಕರೆದಂತೆ, ನೀ ಹೋದಂತೆ, ನೀ ಬರೆದಂತೆ, ನಿನ್ನಿಚ್ಚೆಯಂತೆ ಸಾಗುತ್ತಿದ್ದೇನೆ ಎನ್ನುವ ಅಸಹಾಯಕ ಕೊರಗಿನೊಂದಿಗೆ....ಸಾಗಲಿ ಈ ಪಯಣ ಗುರಿ ಮರೆತು ಹೋಗಿರುವ ಅಲೆಮಾರಿಯಂತೆ...!!!

ಕಾಮೆಂಟ್‌ಗಳಿಲ್ಲ: