ಗುರುವಾರ, ಜುಲೈ 12, 2012

'ಅಮೃತ'ಘಳಿಗೆ.......

‘ಸಮಯ’ ಕೊಟ್ಟಿರುವ ಅಪಾರ ಕೊಡುಗೆಗಳಲ್ಲಿ ಅಮೃತಾ ಕೂಡ ಒಬ್ಬಳು. ಯಾವುದೋ ಮಳೆನಾಡಿನ ಮತ್ತೀಹಳ್ಳಿಯಿಂದ ಬಂದ ಮುಗ್ಧೆ. ಬಂದ ಹೊಸತರಲ್ಲಿ ಅವಳ ಹಾಡಿನಿಂದಲೇ ಎಲ್ಲರಿಗೂ ಇಷ್ಟವಾಗಿದ್ದಳು. ಈಗಲೂ ಅವಳನ್ನ ಅವಳೇ ಹಾಡುತ್ತಿದ್ದ, ನಮ್ಮೆಲ್ಲರ ಮನಸನ್ನ ಗೆದ್ದಿದ್ದ ‘ಮುದುಕಿಯಾದರೇನಾಯ್ತಾ....’ ಹಾಡಿನಿಂದಲೇ ಗುರುತಿಸೋದು. ಗೋಕಾಕ್‌ನಿಂದ ಬೆಂಗಳೂರಿಗೆ ಬಂದ ಹೊಸತರಲ್ಲಿ ಎಲ್ಲರನ್ನೂ ಬೇರೆ ಬೇರೆ ವಿಭಾಗಗಳಿಗೆ ನಿಯೋಜನೆ ಮಾಡಿಬಿಟ್ಟರು. ಅಮೃತಾ ಮತ್ತು ನನ್ನನ್ನು ಇನ್‌ಪುಟ್‌ನ ಕೆಲಸಕ್ಕೆ ಹಾಕಿದ್ರು. ಅದರ ಅರ್ಥ ಗೊತ್ತಿಲ್ಲದ ನಮಗೆ, ನಮ್ಮ ಇನ್‌ಪುಟ್‌ ಸೀಟು ಹಾಗೂ ಕಂಪ್ಯೂಟರ್ ತೋರಿಸಿ ಇಲ್ಲೇ ಕೆಲಸ ಮಾಡಬೇಕೆಂದಾಗ ನಾವಿಬ್ಬರೂ ತಬ್ಬಿಬ್ಬಾಗಿದ್ದೆವು. ‘ದಶರಥರೇ ಕೆಲಸ ಎಂಥ ಅಂತ ಗೊತ್ತಾ’ ಅಂದ್ಲು. ಮುಂಚೆ ಬಹುವಚನದಲ್ಲಿ ಅಮೃತಾ ನನ್ನನ್ನ ಹಾಗೆಯೇ ಕರೆಯುತ್ತಿದ್ದಳು. ನನಗೂ ಕೆಲಸ ಏನೂ ಅಂತ ಗೊತ್ತಿಲ್ಲ ಅಂದೆ. ಇಬ್ಬರೂ ಮುಖ ಮುಖ ನೋಡಿಕೊಂಡೆ ಮೊದಲರ್ಧ ದಿನ ಕಳೆದೆವು.


 ನಮಗಿಂತ ಮೊದಲು ಇನ್‌ಪುಟ್‌ ಕೆಲಸ ಮಾಡುತ್ತಿದ್ದ ಸೀಮಾ, ಅರ್ಪಣಾ ಹೀಗೀಗೆ ಕೆಲಸ ಮಾಡಬೇಕೆಂದು ತೋರಿಸಿದರು. ಅದೆನೋ ಕಷ್ಟದ ಕೆಲಸ ಅಂತಲೇ ತಿಳಿದಿದ್ದ ನಮಗೆ ನಮ್ಮ ಕೆಲಸ ಇಷ್ಟೆನಾ ಎಂದು ಖುಷಿಪಟ್ಟಿದ್ದೆವು. ಜಿಲ್ಲೆಯಿಂದ ಬಂದ ಸುದ್ದಿಯ ಒಂದು ಪ್ರಿಂಟ್‌ನ್ನ ಬುಲೆಟಿನ್ ಪ್ರೊಡ್ಯೂಸರ್‌ಗೆ ಕೊಟ್ರೆ ನಮ್ ಕೆಲಸ ಮುಗೀತು ಅಂತಷ್ಟೇ ಅಂದುಕೊಂಡು, ಬಂದ ಸುದ್ದಿಯನ್ನೆಲ್ಲಾ ಹಾಗೆ ಪ್ರಿಂಟ್ ಹಾಕಿದ್ದೇ ಹಾಕಿದ್ದು, ಕೊಟ್ಟಿದ್ದೇ ಕೊಟ್ಟಿದ್ದು. ಒಂದರ್ಥದಲ್ಲಿ ನಾವಿಬ್ಬರೂ ಆಗ ಕೀ ಕೊಟ್ಟ ಗೊಂಬೆಗಳಂತೆ. ದಿನ ಕಳೆದಂತೆ ಜವಾಬ್ದಾರಿಗಳೂ ಜಾಸ್ತಿ ಆಗುತ್ತಾ ಹೋದವು. ನಮ್ಮ ನಡುವಿನ ಸ್ನೇಹವೂ ಬೆಳೆದು ಹೆಮ್ಮರವಾಗಿತ್ತು. ದಶರಥರೇ ಅನ್ನುತ್ತಿದ್ದವಳು ದಶಾ...... ಎಂದು, ಅಮೃತಾ ಎನ್ನುತ್ತಿದ್ದವನು ಅಮ್ಮು ಅಂತ ಕರೆಯುವವರೆಗೆ...


 ಡೆಸ್ಕ್ ಸುದ್ದಿಮನೆ ಅಂದ್ರೆ ಕೇಳ್ಬೇಕಾ, ಬಂದ ಸುದ್ದಿ ಹಾಗೆ ಬಿಸಿ ದೋಸೆಯಂತೆ ಕೊಡುತ್ತಲೇ ಇರಬೇಕು. ಎಂತಹ ಸಂಧರ್ಭದಲ್ಲೂ ಧೃತಿಗೆಡದೇ ಸಮರ್ಥವಾಗಿ ಕೆಲಸ ಮಾಡುತ್ತಿದ್ದೆವು. ಹೀಗಾಗಿಯೇ ಡೆಸ್ಕ್ ನಲ್ಲಿ ಎಲ್ಲರೂ ನಮ್ಮನ್ನ ಪ್ರೀತಿಯಿಂದ ಕಾಣುವಂತಾಗಿತ್ತು. ಕೆಲಸದ ಮಧ್ಯದಲ್ಲಿ ಹೀಗೆ ಒಂದಷ್ಟು ಹರಟುತಿದ್ದೆವು. ಅವಳ ಬಾಲ್ಯ, ಓದಿದ ಶಾಲೆ, ಅಪ್ಪ, ಅಮ್ಮ, ತಂಗಿಯ ಬಗ್ಗೆ, ಮಾಡಿದ ತುಂಟಾಟಗಳು, ಮಾಡಿದ ಜಗಳಗಳು, ದುಃಖದ ಕ್ಷಣಗಳು, ಸಂತಸದ ಕ್ಷಣಗಳು, ಹೀಗೆ ಎಲ್ಲವನ್ನೂ ಹೇಳಿಕೊಳ್ಳುತ್ತಿದ್ದಳು. ಚೆನ್ನಾಗಿ ಕೆಲಸ ಮಾಡಿದಾಗ ನೀನು ಜಾಣ, ನನಗೂ ಹೇಳಿಕೊಡು ಅಂದಾಗ ನಾನು ಹಿರಿ ಹಿರಿ ಹಿಗ್ಗುತ್ತಿದ್ದೆ. ಎಡವಟ್ಟು ಮಾಡಿದಾಗ ಮುಖ ಮುಲಾಜಿಲ್ಲದೇ ಝಾಡಿಸಿದಾಗ, ಸಪ್ಪೆ ಮುಖ ಹಾಕಿಕೊಂಡು ಕೂತಿದ್ದುಂಟು. ಹ್ಹಾ.... ಹೇಳೋದು ಮರೆತೆ ಅವಳಿಗೆ ಧಾರವಾಹಿ ನಟಿಯಾಗಬೇಕೆಂಬ ಹೆಬ್ಬಯಕೆ. ತಾನು ನಟಿಯಾಗಬೇಕೆಂದು, ಅದಕ್ಕೆ ಕಲಿತಿರುವ ಭರತನಾಟ್ಯ, ಸಂಗೀತದ ಪ್ರಯೋಗಗಳು ಆಗಾಗ ನಡೆಯುತ್ತಲೇ ಇದ್ದವು. ಕೆಲಸ ಬೇಜಾರಾದಾಗ “ದಶಾ ನನಗೆ ಈ ಕೆಲಸ ಬ್ಯಾಡಾಗಿತ್ತು. ಬೇಗ ಮದ್ವೆ ಆಗಿ ನೈಟಿ ಹಾಕ್ಕೊಂಡು ಟಿವಿ ನೋಡ್ತಾ ಕೂರೋ ಆಂಟಿಯಾಗ್ಬೇಕು, ಸಾಕು ಈ ಕೆಲಸದ ಸಹವಾಸ” ಅಂತಲೂ ಗೊಣಗಿದ್ದುಂಟು.


 ಎಲ್ಲೋ ಹುಟ್ಟಿ ಎಲ್ಲೋ ಬೆಳೆದ ನಮ್ಮಿಬ್ಬರನ್ನೂ ಸ್ನೇಹ ಬಂಧನ ಗಟ್ಟಿಯಾಗಿ ಬಂಧಿಸಿದೆ. ಆತ್ಮೀಯ ಗೆಳೆಯರಲ್ಲಿ ಅಮೃತಾಳು ಪ್ರಮುಖಳು. ಅದೇನೇ ಸಂತೋಷ, ಅದೇನೇ ಹೊಸ ವಿಷಯ ಇದ್ದರೂ ಅವಳಿಗೆ ಹೇಳದೇ ಇರಲಾರೆ. ಅವಳೂ ಅಷ್ಟೇ. ನಾನು ರಾಯಚೂರಿಗೆ ವರ್ಗವಾಗಿ ಹೊರಟಾಗ, ಸಹೋದರಿಯನ್ನ ಬಿಟ್ಟು ದೂರಕ್ಕೆ ಹೊರಟು ನಿಂತ ಅಣ್ಣನ ಹಾಗಿತ್ತು. ರಾಯಚೂರು, ಹೈದ್ರಾಬಾದ್ ಸುದ್ದಿಗಳನ್ನ ನೋಡಿ ಶಹಬ್ಬಾಷ್ ಕಣೋ ಅಂತ ಕೊಂಡಾಡಿದ್ದಳು. ನನ್ನ ಯಶಸ್ಸನ್ನ ಖುಷಿಯಿಂದ ಸಂಭ್ರಮಿಸಿದ್ದಳು. ಅಂತಹ ಪ್ರೀತಿಯ ಸ್ನೇಹಿತೆ ಈಗ ಆಂಟಿಯಾಗಿದ್ದಾಳೆ. ಅರ್ಥಾತ್ ಮದ್ವೆಯಾಗಿ ವಿನಯರೊಂದಿಗೆ ಹೊಸ ಜೀವನಕ್ಕೆ ಕಾಲಿರಿಸಿದ್ದಾಳೆ. ಅವಳ ಮದುವೆಗೆಂದುಬತಿಂಗಳುಗಟ್ಟಲೇ ಕಾದು, ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾದೆವು ನಾವೆಲ್ಲ. ಸುನಿಲ್ ಶಿರಸಂಗಿ ಸರ್, ದಯಾನಂದ, ಸುಶಿಲ್, ಸಂಗೀತಾ, ಅಮೃತಾ, ಕಿರಣ, ಭಾಗ್ಯ, ಸೀಮಾ, ಸೌಮ್ಯ, ಸುಗಂಧಿ ಎಲ್ಲರೂ ಅವಳ ಮದುವೆಯಲ್ಲಿ ಫೋಸು ಕೊಟ್ಟೆವು. ಜೊತೆಗೆ ನಿಂತಾಗ ಅವಳ ಖುಷಿಗೆ ಪಾರವೇ ಇರಲಿಲ್ಲ. ಜಿನಿ ಜಿನಿ ಸುರಿಯುವ ಮಳೆಯಲ್ಲಿ ಅವಳ ಮದುವೆಯನ್ನ ನಾವೂ ಸಂಭ್ರಮಿಸಿದೆವು. ಈ ಸಂಭ್ರಮ ಅವಳ ಬಾಳಲ್ಲಿ ಹೀಗೆ ಇರಲಿ ಎಂದು ಹಾರೈಸುವೆ....
                                             ಇಂತಿ ನಿನ್ನ ಗೆಳೆಯ ದಶ...