ಮಂಗಳವಾರ, ಜನವರಿ 26, 2016

ಕಡಲ ತೀರದಿ ಕೈ ಹಿಡಿದು ನಡೆದಾಗ...



 
ಸುಂದರ ಸಂಜೆಯೊಂದನ್ನ ಕಾಣದ ಕಡಲ ತಡಿಯಲ್ಲಿ ಕುಳಿತುಕೊಂಡು ಆಸ್ವಾದಿಸೋ ತುಡಿತ. ಆ ಸೂರ್ಯ ಕಡಲಿನ ಮಡಿಲು ಸೇರುವ ಅನನ್ಯ ಇಳಿಸಂಜೆಯನ್ನ ಏಕಾಂತದಿ ಕಣ್ತುಂಬಿಕೊಳ್ಳೋ ತವಕ. ನನ್ನನ್ನೂ ಸೇರಿದಂತೆ ಯಾರ ಹಿಡಿತಕ್ಕೂ ಸಿಗದ ಈ ಮಾಯಾಮರ್ಕಟ ನನ್ನ ಮನಸ್ಸು ಧ್ಯಾನಸ್ಥನಾಗಬೇಕೆಂಬ ಉದ್ಘಾರದ ಉತ್ಕಟತನ. ಧ್ಯಾನಿಯಂತೆ ಮೌನಿಯಾಗಿ ಮನಸ್ಸಲ್ಲೇ ಅಳಿದುಳಿದ ಭವ-ಭಾವನೆಗಳ ಬಡಿದಾಟಕ್ಕೆ, ತೀರದ ತಾಕಲಾಟಕ್ಕೆ ತೀರದಿ ಕುಳಿತು ತಾತ್ಪರ್ಯ ಹುಡುಕುವಲ್ಲಿ ನಿರತನಾಗಬೇಕೆಂಬ ವೈರಾಗ್ಯಭಾವ. ಈ ವೈರಾಗ್ಯಭಾವ ಆಗಾಗ ಮನದ ಕಡಲಿಗೆ ಜೋರಾಗಿಯೇ ಅಪ್ಪಳಿಸಿದೆ, ಅಷ್ಟೇ ವೇಗವಾಗಿ ಹಿಂದುರಿಗಿದ್ದೂ ಇದೆ. ಕಡಲಿಗೂ ಸೇರದ, ದಡಕ್ಕೂ ಬಾರದವುಗಳು ಕೆಲವು ಕೂಡ. ಇಂತಹ ಸಂದಿಗ್ಧತೆಯಲ್ಲಿ ಮನಸ್ಸು ಸಾಗುತ್ತಿರುವಾಗಲೇ, ಸಂದಿಗ್ಧತೆಗೆ ಸಮಾರೋಪ ಹಾಡಿ ಸುಂದರ ಕನಸುಗಳ ಬಿತ್ತುವ ಭುವಿಯಾಯ್ತು ಮನಸ್ಸು.

 
ತವಕ-ಕುಹಕಗಳೇನೇ ಇದ್ದರೂ ಭುವಿಯಲ್ಲಿ ಹಸಿರ ಕನಸುಗಳು ಚಿಗುರೊಡೆದ್ವು. ಬರುಡಾಗಿದ್ದ ಬಂಜರು ಬದುಕಲ್ಲಿ ಬಂಗಾರದ ಪ್ರೀತಿ ಮೊಳಕೆಯೊಡೆದು, ಮನಕೆ ತಂಗಾಳಿ ಬೀಸಿದಂತಾಯ್ತು. ಮನದಲ್ಲಿ ಹುದುಗಿದ್ದ ವೈರಾಗ್ಯಕ್ಕೀಗ ದೂರಹೋಗದೇ ವಿಧಿಯಿಲ್ಲ. ಬಹುದೂರ ಸಾಗಿ ಬಂದಿರುವ ಪ್ರೀತಿ ಪಯಣದ ಒಂದೊಂದು ಹೆಜ್ಜೆಯೂ ಅಚ್ಚಳಿಸದಂತೆ ಅಚ್ಚಾಗಿವೆ. ಸ್ವಚ್ಛ ಮನಸ್ಸಿನ ಮುಗ್ಧ ಪ್ರೀತಿ ಸಿಕ್ಕಿದ್ದು ಮಾಮೂಲಿಯ ಮಾತು ಅಲ್ಲವೇ ಅಲ್ಲ. ಅವಳೊಂದಿಗೆ ಕಳೆದ ಅದ್ಭುತ ಕ್ಷಣಗಳ ದೊಡ್ಡ ರಾಶಿಯನ್ನ ಮನ ಕಣದಲ್ಲಿ ಹಾಗೆಯೇ ಜೋಪಾನವಾಗಿ ಇಟ್ಟಿದ್ದೇನೆ. ಅಮ್ಮನ ಅಕ್ಕರೆಯಷ್ಟೇ ಪರಿಶುದ್ಧವಾದ ಅಪ್ಪುಗೆ, ಮುದ್ದಾದ ಮಾತು, ಮನದಿಂಗಿತಗಳ ತುಲಾಭಾರ ಮೈಮನಗಳಲ್ಲಿ ಎಂದಿಗೂ ಪುಳಕ ಸೃಷ್ಟಿಸುವಂತಹದ್ದು. ಜೀವನದ ಸಂಧ್ಯಾಕಾಲಕ್ಕೂ ಸಿಹಿ ಉಣಬಡಿಸುವ, ಮೊಗದಲ್ಲಿ ಚಿಕ್ಕದೊಂದು ಮಂದಹಾಸ ಮೂಡಿಸುವ ಸವಿ ನೆನಪುಗಳವು. ಅರಳು ಮರಳಾದ್ರು.., ಅರೆ ಬರೆ ಬೆಂದರೂ... ಮರಳಲ್ಲಿ ಮನಸು ಬಿಚ್ಚಿ ಹಾರಾಡಿದ್ದ ನೆನಪುಗಳು ಅಚ್ಚಳಿಯದೇ ಅಜರಾಮರ.

ಎಂದೂ ಮರೆಯದ ನೆನಪುಗಳ ಆಗರದಲ್ಲಿ ಅಪ್ಪಳಿಸುವ ಕಡಲತಡಿಯ ಆ ನೆನಪುಗಳ ಹಿಡಿದಿಡುವ ಶಬ್ದಗಳು ಪ್ರಾಯಶಃ ಸಿಗಲು ಸಾಧ್ಯವಿಲ್ಲ. ಅದೊಂದು ಸುಂದರ ಇಳಿ ಸಂಜೆ, ಕಡಲಪ್ಪಳಿಸುತ್ತಿದ್ದ ಅಲೆಗಳು ಅಕ್ಕರೆಯಿಂದ ನಮ್ಮನ್ನ ಆಹ್ವಾನಿಸಿದಂತೆ ಭಾಸವಾಯ್ತು. ಮರಳಿನ ರಾಶಿಯಲ್ಲಿ ಹೆಜ್ಜೆ ಹಾಕುತ್ತಾ ನನ್ನವಳ ಕೈ ಹಿಡಿದುಕೊಂಡು ತೀರದಿ ಬಹುದೂರ ನಡೆದು ಹೋಗೋಣ ಎನ್ನುವ ಅವಸರ ನನ್ನದು. ಆಗಷ್ಟೇ ನಮ್ಮ ಪ್ರೀತಿಯನ್ನ ಕಂಡ ಸೂರ್ಯ ನಾಚಿಕೊಂಡು ಕೆಂಬಣ್ಣಕ್ಕೆ ತಿರುಗಿದ್ದ. ಇನ್ನೊಂದು ಗೇಣುದ್ದ ಮಾತ್ರ, ಕಡಲಿನ ಮಡಿಲಿಗೆ ಜಾರಲು. ನನ್ನವಳೊಂದಿಗೆ ಸಮುದ್ರದಂಚಿಗೆ ನಿಂತುಬಿಟ್ಟಿದ್ದೆ. ಇಬ್ಬರ ದೃಷ್ಟಿಯೂ ಕೆಂಪು ಸೂರ್ಯ, ನೀಲಿ ಕಡಲನು ಸ್ಪರ್ಶಿಸುವ ಅದ್ಭುತ ಕ್ಷಣಕ್ಕೆ ನಾವು ಸಾಕ್ಷಿಯಾದೆವು. ಹೊನ್ನರಾಶಿಯಲಿ ದಿನಕರ ದಿನದಾಟ ಮುಗಿಸಿ ಹೊರಟ ಹೊತ್ತಿನಲ್ಲಿ, ನಮ್ಮ ಜೀವನದ ಬೆಳಕು ಹೊತ್ತಿಸುವ ಹುಮ್ಮಸ್ಸು ನಮ್ಮದು. ಇಬ್ಬರೂ ಒಬ್ಬರನ್ನೊಬ್ಬರು ರೆಪ್ಪೆಬಡಿಯದಂತೆ ನೋಡಿದೆವು, ದಿಗಂತದೆಡೆಗೆ ಮನಸ್ಸು ಮೂಕ ವಿಸ್ಮಿತವಾಗಿತ್ತು. ಸೂರ್ಯ ನೀಲಿಕಡಲ ಮನೆಯೊಳಗೆ ಬೆಚ್ಚಗೆ ಸೇರಿಬಿಟ್ಟ. ಮನಸ್ಸಿನಲ್ಲಿ ಇಬ್ಬರಿಗೂ ಏನೋ ಕಳೆದುಹೋದಂತಾಯ್ತು.

                                                 ಸೂರ್ಯಾಸ್ತದ ಮರುಕ್ಷಣವೇ ಅಲ್ಲಿಂದ ಕಾಲ್ಕಿತ್ತವಳು ಓಟ ಆರಂಭಿಸಿಯೇ ಬಿಟ್ಟಳು. ಮರಳಿನ ಹಾದಿಯಲ್ಲಿ ಒಂದು ಚಿಕ್ಕ ರನ್ನಿಂಗ್ ರೇಸ್ ಏರ್ಪಟ್ಟಿತ್ತು, ನನ್ನನ್ನು ಹಿಂದೆ ಹಾಕು ಎನ್ನುವ ಸವಾಲು ಕೂಡ. ಮನಸ್ಸು ಬಯಸಿದಂತೆ ಮರಳಿನ ಮಡಿಲಲ್ಲಿ ಮಕ್ಕಳಾದ ನಾವು ಅಲ್ಲಿ ಆಡಿದ್ದೇ ಆಟ, ನೀರಿನಲ್ಲಿ ಬಿದ್ದು ಒದ್ದೆಯೂ ಕೂಡ.
ಬಟ್ಟೆಯಷ್ಟೇ ಅಲ್ಲ, ಇಬ್ಬರ ಕಣ್ಣುಗಳು ಭಾವುಕತೆಯಿಂದ ಒದ್ದೆಯಾಗಿದ್ದವು. ಇಬ್ಬರೂ ಮೌನವಾಗಿಯೇ ಬಂದ ದಾರಿಯಲ್ಲಿ ಸಾಗಿದೆವು. ಕಡಲೇ ಮನಸ್ಸಿನ ಮಾತುಗಳಿಗೆ ವೇದಿಕೆಯಾಯ್ತು. ಕನಸು, ತುಮುಲ, ಭವಿಷ್ಯದ ಹಾದಿಯನ್ನ ಹುಡುಕುತ್ತಲೇ ಮರಳಹಾದಿ ಸವೆಸಿದ್ವು. ಎಲ್ಲೂ ಮಾತಿಲ್ಲ, ಕತೆಯಿಲ್ಲಬರೀ ಮೌನದಿ ಸಾಗಬೇಕು, ಹೀಗೆ ಸಾಗುವಾಗ  ಮನಸ್ಸಿನ ಮಾತುಗಳಿಗೆ ಕಡಲೇ ವೇದಿಕೆಯಾಗಲಿ ಅನ್ನೋದು ನನ್ನ ಆಸೆಯಾಗಿತ್ತು ಕೂಡ. ತಕ್ಷಣಕ್ಕೆ ನಾನಂದುಕೊಂಡಿದ್ದ ಮೌನಿಯಂತೆ ಕಡಲ ತಡಿಯಲ್ಲಿ ಧ್ಯಾನಿಯಾಗಬೇಕೆಂಬ ಮಾತು ನೆನಪಾಗಿದ್ದು. ಅಂದು ಕಳೆದ ಇಳಿಸಂಜೆಯಲ್ಲಿ ಮುಳುಗಿದ ಸೂರ್ಯ ಈಗಲೂ ನಮ್ಮ ಮನಸ್ಸಲ್ಲಿ ನಿತ್ಯವೂ ಅರಳುತ್ತಿದ್ದಾನೆ. ಮರಳಿ ಮರಳಿ ಮರಳಿನ ರಾಶಿಯಲ್ಲಿನ ನೆನಪಿನ ರಾಶಿ ಮನದಣಿಸುತ್ತಲೇ ಇದೆ. 

ಕಾಮೆಂಟ್‌ಗಳಿಲ್ಲ: