ಬುಧವಾರ, ಆಗಸ್ಟ್ 7, 2013

ಮರೆಯಲೆಂತೋ ಮಲ್ಲಿಗೆಯ ಘಮ...!!!

                                       ಮನಸ್ಸಿನ ಮನಸ್ಸಿಗೆ ಮಂಕು ಕವಿದು ಮುಸ್ಸಂಜೆಯಲ್ಲಿ ಮೂಕವಾಗಿ ಮುಳುಗಿದ ಸೂರ್ಯನ ಉದಯಕ್ಕೆ ಕಾದು ಕುಳಿತಂತಿದೆ. ಭೂಮಿಯ ಋಣ ತೀರಿಸದಿದ್ದರೂ ಮರಳಿ ಮಣ್ಣಿಗೆ ಸೇರುತ್ತಿರುವ ದೇಹದ ಮೇಲಿರುವ ಮಲ್ಲಿಗೆ ಘಮಘಮಿಸುತ್ತಲೇ ಇದೆ.  ಸೇರುವುದು ಮಸಣವಾದ್ರೂ ಮೊಗದಲ್ಲಿ ಮುಗಳ್ನಗೆ ಕುಂದದೇ ಧೀರ್ಘಪಯಣದ ದಿಕ್ಕಿನಲ್ಲಿ ಮೂಕವಿಸ್ಮಿತ. ನಗುಮೊಗದ ಯೌವ್ವನದ ಚೆಲುವೆಯ ಮುಡಿಯೇರಿ ಅವಳ ಸೌಂದರ್ಯ ಹೆಚ್ಚಿಸಿದ್ದ ಹಿರಿಮೆಯನ್ನ ಮಲ್ಲಿಗೆ ಮೌನವಾಗಿ ಮರೆತಂತಿದೆ. ಮುಡಿದು ಮೆರೆದವಳೂ ಮನಸ್ಸು ಮುರಿದುಕೊಂಡು ಮರಳಿ ಬರುವುದಿರಲಿ ಮಲ್ಲಿಗೆ ಸುವಾಸನೆಗೂ ಅವಳು ದ್ವೇಷಿ. ಅದೇಕೋ ಸಂಬಂಧಗಳು ಸಿಹಿ ಅನ್ನಿಸುವಾಗ ಕಹಿಯೂ ಸಿಹಿ, ಆದ್ರೆ ಒಮ್ಮೆ ಕಹಿಯಾದ್ರೆ ಎಂತಹ ಸಿಹಿಯೂ ಸಿಹಿಯಾಗಲಾರದು ಅನ್ನಿಸುತ್ತೆ. ಅಂತಹದ್ದೇನಾಯ್ತು ಅಂತ ಪ್ರಶ್ನಿಸಿಕೊಂಡರೆ ಸಿಕ್ಕುವುದು-ಧಕ್ಕುವುದು ಹೇಳಿಕೊಳ್ಳುವ ಕಾರಣಗಳಲ್ಲ. ಅಂತಹ ಕಾರಣ ಸಿಕ್ಕಿದ್ರೆ ಕಾರಣ ಹೇಳಿಯೇ ಹೊರಡಬಹುದಿತ್ತೇನೋ?... ಹೊರಟಾಗಿದೆ..
                                      ಮತ್ತೆ ಬಾರನೆಂಬುದು ಸತ್ಯವೆನಿಸಿದ್ರೂ ಸತ್ಯದ ಭರವಸೆ ಸಾಕಷ್ಟು ಬಾರಿ ಕಳಚಿ ಸತ್ಯ ಬೆತ್ತಲಾಗಿದೆ ಆದ್ರೀಗ ಮತ್ತೆ ಕತ್ತಲಾಗಿದೆ. ಕತ್ತಲು-ಬೆತ್ತಲೆಗಳ ಮಧ್ಯೆ ಮಲ್ಲಿಗೆ ಘಮಘಮಿಸಿ-ಸುಖಿಸಿದ ಮನಸ್ಸಿಗಿಂದು ಮಾರ್ಗ ಕಾಣದ ಕುರುಡುಗತ್ತಲೆ ಆವರಿಸಿದೆ. ಇದು ಕಾರ್ಗತ್ತಲೆಯೇ? ಆಗಿದ್ದೇ ಆದ್ರೆ ಅದ ಬೆಳಗಲು ದೀಪ ಹೊತ್ತಿಸಬೇಕಿದೆ. ಮನಸ್ಸೆಂಬ ದೀಪಕ್ಕೆ ನೆನೆಪೆಂಬ ಬತ್ತಿಯಿದ್ದರೂ ಕತ್ತಲೆ ಕಳೆಯುವ ಕಿಡಿ ಮಾತ್ರ ಹೊತ್ತುತ್ತಲೇ ಇಲ್ಲ. ಹೊತ್ತು-ಗೊತ್ತಿಲ್ಲದೇ ಹೊತ್ತಿ ಉರಿಯುತ್ತಿದ್ದ ದೀಪವೀಗ ಸ್ಥಬ್ಧವಾದ ಭಾಸ... ನೆನೆಪೆಂಬ ಬತ್ತಿ ಪ್ರೀತಿಯ ಎಣ್ಣೆಯಲ್ಲಿ ಅದೆಷ್ಟು ಮಿಂದೆದ್ದು, ಹೊಯ್ದಾಡಿ, ಹೊರಳಾಡಿದ್ರೂ ಬೆಳಕ ಬೆಳಗದೇ ಮೋಕ್ಷವಿಲ್ಲ. ಮೋಹಕ್ಕೆ ಸಿಲುಕದೇ ಹೋಗಿದ್ದರೆ ಹೊತ್ತಿದ್ದ ಪ್ರೀತಿಯ ಕಿಡಿ  ಬೆಳಗುತಿತ್ತೇ ಅನ್ನೋ ಜಿಜ್ಞಾಸೆ ಮನಸ್ಸನ್ನ ಹಿಂಸಿಸುತ್ತಿದೆ. ಮೋಹವೇ ಇರುವ ಪ್ರೀತಿಗೆ ಕೊಳ್ಳಿಯಿಟ್ಟು ರಕ್ಕಸಾನಂದ ಪಡುತ್ತಿದೆಯಾ?. ಘಮಘಮಿಸಿದ ಮಲ್ಲಿಗೆಗೂ-ಬೆಳಗಿದ ದೀಪಕ್ಕೂ ಮೋಹದ ಮೋಸದ ಬಲೆಗೆ ಸಿಲುಕಿ ನಲುಗಿದ ಪ್ರಾಯಶ್ಚಿತವೂ ಇಲ್ಲ. ಮುಳುಗಿದ ಸೂರ್ಯ ಮರಳಿ ಉದಯಿಸುವನೆಂಬ ಭರವಸೆಯಲ್ಲೇ ಬದುಕು....!!!

ಕಾಮೆಂಟ್‌ಗಳಿಲ್ಲ: