ಶುಕ್ರವಾರ, ನವೆಂಬರ್ 16, 2012

ಬಾಲ್ಯ ಮತ್ತೆ ನೆನಪಾಗಿದೆ....

                            ಆ ದಿನಗಳಂತೂ ಮತ್ತೊಮ್ಮೆ ಬರೋದಿಲ್ಲ. ಆದ್ರೆ ಆಗ ಕಳೆದ ಪ್ರತಿಯೊಂದನ್ನೂ ಮರೆಯೋಕೆ ಸಾಧ್ಯವೇ ಇಲ್ಲ. ಬಾಲ್ಯದ ಸಿಹಿ-ಕಹಿ, ಮುಜುಗರದ, ಹೇಳಲಾಗದ, ಹೇಳಿದರೂ ಕೇಳಲಾಗದ ಅದೆಷ್ಟೋ ಸಂಗತಿಗಳು... ಇದೆಲ್ಲವೂ ಇಂದು ಮತ್ತೆ ನೆನಪಾಗಿದೆ. ನೆನಪುಗಳನ್ನೇ ಮತ್ತೆ ಮತ್ತೆ ನೆನೆಯುತ್ತಾ, ಕಣ್ಣಂಚಲಿ ದೃಶ್ಯಗಳು ಹೊಯ್ದಾಡಿ ಒದ್ದೆಯಾದ ಅನುಭವ. ಮುದ್ದು ನೆನಪುಗಳ ಸದ್ದಿಲ್ಲದೇ ಸವಿಯುತ್ತಿದ್ದ ನನಗಿಂದು ಅವುಗಳನ್ನ ಹಂಚಿಕೊಳ್ಳುವ ತವಕ....
                  
                              ನನಗೆ ತೀರ ಹತ್ತಿರವಾದ ವ್ಯಕ್ತಿಯೊಂದಿಗೆ ಅಪರೂಪಕ್ಕೆ ಮಾತಾಡುತ್ತಿದ್ದೆ. ದಿನದಲ್ಲಿ ಎರಡು ಬಾರಿ ಮಾತನಾಡಿದ್ದು ಬಹುಷ ಇದೇ ಮೊದಲು. ಹರಟುತ್ತಾ, ಕಾಲೆಳೆಯುತ್ತಾ, ಕೀಟಲೇ, ಜಗಳ ಬಳಿಕ ಕ್ಷಮೆ ಹೀಗೆ ಸಾಗುತ್ತಲೇ ಇತ್ತು. ವರ್ತಮಾನದಲ್ಲಿದ್ದ ಅವಳ ಮನಸ್ಸು ಯಾಕೋ ಭೂತದ ನೆನಪುಗಳನ್ನ ಮೆಲುಕುಹಾಕೋಕೆ ಮುಂದಾಯ್ತು. ಹಠಮಾರಿ, ಯಾರೇ ಹೇಳಿದ್ರೂ, ಕರೆದ್ರೂ ಬಾರದ ಪುಟ್ಟ ಬಾಲೆ, ಸುಮಾರು ಮೂರರ ಪ್ರಾಯದ ಚೋಟು ಅಷ್ಟೇ. ಯಾರಿಗೂ ಜಗ್ಗದ ಈ ಚೋಟು ಪಕ್ಕದ ಮನೆಯ ಮತ್ತೊಂದು ಹುಡುಗನೆಂದ್ರೆ ಪಂಚಪ್ರಾಣವಂತೆ. ಅವನು ಸ್ಕೂಲ್ ಬ್ಯಾಗ್ ಹಾಕಿಕೊಂಡು ಬಂದ್ರೆ ಸಾಕು, ಇವಳೂ ಅವನೊಂದಿಗೆ ಸ್ಕೂಲಿಗೆ ಸನ್ನದ್ಧಳಾಗುತ್ತಿದ್ದಳಂತೆ. ಬಾಲಮುರುಳಿ ಅದ್ಯಾವ 'ಮೋಹ'ನ ಮೋಡಿ ಮಾಡಿದ್ದನೋ, ಚೋಟು ಹಠವಾದಿಯಾದ್ರೂ ಅವನೊಮ್ಮೆ ಇವಳತ್ತ ಸುಳಿದ್ರೆ ಸಾಕು, ಇವಳು ಮೌನಿಯಾಗುತ್ತಿದ್ದಳಂತೆ.....!!! ವಿಸ್ಮಯವಲ್ಲದೇ ಮತ್ತಿನ್ನೇನು..? ಈಗೇನಾದ್ರೂ ಅವನು ನನಗೆ ಸಿಕ್ರೆ, ಅದೇನ್ ಮೋಡಿ ಮಾಡಿದ್ದ ಅಂತ ಕೇಳದೇ ಬಿಡೋದಿಲ್ಲ.

                        ಇಷ್ಟು ಸಾಕಿತ್ತು ನನ್ನೆದೆ ನನ್ನ ಚೋಟು ಡೇಯ್ಸ್ ಗೆ ಹೋಗೋಕೆ... ಆಗ ನನಗಿನ್ನೂ ಕೇವಲ ಮೂರು ವರ್ಷವಂತೆ. ಅಸಂಖ್ಯಾತ ಭಕ್ತರನ್ನ ಹೊಂದಿದ್ದ, ನಮ್ಮ ಭಾಗದ ದೊಡ್ಡ ಜಾತ್ರೆ ತಿಂಥಿಣಿ ಮೌನೇಶ್ವರನ ಜಾತ್ರೆ ಆರಂಭವಾಗಿತ್ತಂತೆ. ನಮ್ಮ ಬಂಧು-ಬಳಗ ನೆಂಟರಿಷ್ಟರೊಡನೆ ಅಪ್ಪ ಅಮ್ಮ ನನ್ನನ್ನೂ ಕರೆದುಕೊಂಡು ಹೋಗಿದ್ರಂತೆ. ದೇವಸ್ಥಾನಕ್ಕಿಂತ ಸ್ವಲ್ಪ ದೂರದಲ್ಲಿ ಬಿಡಾರ ಹೂಡಿದ್ದಾರೆ. ಜನಜಂಗುಳಿಯಿಂದ ತುಂಬಿ ತುಳುಕಿದ್ದ ಕಾರಣಕ್ಕಾಗಿ, ನನ್ನನ್ನ ನನ್ನ ಸೋದರತ್ತೆ-ಮಾವನವರ ಸುಪರ್ದಿಗೆ ಒಪ್ಪಿಸಿದ ಅಪ್ಪ-ಅಮ್ಮ, ದರ್ಶನಕ್ಕೆಂದು ದೇವಸ್ಥಾನಕ್ಕೆ ಹೋಗಿದ್ದಾರೆ. ಬರುವವರೆಗೂ ಇವನು ನಿಮ್ಮೊಡನೆ ಇರಲಿ ಜೋಪಾನ ಎಂದು ಹೇಳಿ ಹೊರಟು ಹೋಗಿದ್ದಾರೆ. ಅದಾಗ ತಾನೆ ಮದ್ವೆಯಾಗಿದ್ದ ಅವರಿಗೆ ಜಗದ ಪರಿವೇ ಇಲ್ಲದಂತೆ, ಮಾತಿನ ಲೋಕದಲ್ಲಿ ಮುಳುಗಿದ್ದಾರೆ. ಜನಜಂಗುಳಿಯೇ ಲೆಕ್ಕಕ್ಕೇ ಇಲ್ಲ ಎಂದಾದಮೇಲೆ ಇನ್ನು ನಾನಾವ ಲೆಕ್ಕ. ನನ್ನನ್ನೂ ಮರೆತುಬಿಟ್ಟಿದ್ದಾರೆ... ಮೂರರ ಪ್ರಾಯದ ನಾನು ನಿಧಾನವೇ ಅಲ್ಲಿಂದ ಕಾಲ್ಕಿದ್ದೇನೆ. ಸುಮಾರು ದೂರ, ಜನಜಾತ್ರೆಯ ನಡುವೆ ಹೊರಟು ಹೋಗಿದ್ದೆ. ದರ್ಶನದ ಬಳಿಕ ಅಪ್ಪ-ಅಮ್ಮ ನಾನಿಲ್ಲದ್ದನ್ನ ನೋಡಿ ದಿಗಿಲುಗೊಂಡಿದ್ದಾರೆ. ನನ್ನ ಮಗ ಕಳೆದೇ ಬಿಟ್ಟ ಅಂತ ಗೋಳಾಡಿದ್ದಾರೆ. ಈ ಮಧ್ಯೆ ನನ್ನ ಜವಾಬ್ದಾರಿ ಹೊತ್ತಿದ್ದ ಅತ್ತೆ ಮಾವನಿಗೂ ತಕ್ಕ ಮಂಗಳಾರತಿಯೂ ನಡೆದಿದೆ. ಜಾತ್ರೆಯಲ್ಲಿ ಮಕ್ಕಳ ಕಳ್ಳರಿದ್ದಾರೆ ಎಚ್ಚರಿಕೆ ಎಂದು ದೇವಸ್ಥಾನದ ಮೈಕ್ ನಿಂದ ಅನೌನ್ಸಮೆಂಟ್ ಕೇಳಿ ಅಮ್ಮ ಮತ್ತಷ್ಟು ಚಿಂತೆಗೀಡಾಗಿದ್ದಳು. ಕಿವಿಯಲ್ಲಿರುವ ಬಂಗಾರದ ರಿಂಗ್ ಕದಿಯೋಕೆ ನನ್ನ ಮಗನನ್ನ ಯಾರೋ ಕದ್ದೊಯ್ದಿದ್ದಾರೆ ಎಂಬ ಅನುಮಾನ ಮೂಡದೇ ಇರಲಿಲ್ಲ.


                           ದಿಗ್ಭ್ರಾಂತರಾಗಿ ಹುಡುಕಿ, ಬೇಸತ್ತಾಗಲೇ ಮತ್ತೊಂದು ಅನೌನ್ಸ್ ಮೆಂಟ್ ಕಿವಿಗೆ ಬಿದ್ದಿದೆ. "ಯರಮಸಾಳ ಗ್ರಾಮದ ಚಿಕ್ಕ ಹುಡುಗ ಸಿಕ್ಕಿದ್ದಾನೆ. ಸಂಬಂಧಪಟ್ಟವರು ಬಂದು ಕರೆದುಕೊಂಡು ಹೋಗಿ" ಎಂದು. ಇದು ಕೇಳಿದ್ದೇ ತಡ ಎದ್ನೋ ಬಿದ್ನೋ ಅಂತ ಓಡಿ ಬಂದಿದ್ದಾರೆ. ಗಾಬರಿಯಾಗಿದ್ದ ಅವರಿಗೆ ನನ್ನನ್ನ ನೋಡಿ ಜೀವ ಬಂದಂತಾಗಿತ್ತು. ಆದ್ರೆ ಕಳೆದುಹೋಗಿದ್ದ ಆಸಾಮಿ ನಾನು ಮಾತ್ರ ಯಾರೋ ಕೊಡಿಸಿದ್ದ ಬೆಂಡು, ಬತಾಸು ಮುಕ್ಕುವುದರಲ್ಲೇ ಬಿಜಿಯಾಗಿದ್ದನಂತೆ.....!!!

                  

ಕಾಮೆಂಟ್‌ಗಳಿಲ್ಲ: