ಭಾನುವಾರ, ಜನವರಿ 1, 2012

ಹಸಿವು ... ಹರಿದ ಚಪ್ಪಲಿ ಮತ್ತು ಸುದ್ದಿ

ನಿಜಾಮನೂರು ಹೈದ್ರಾಬಾದ್‌ಗೂ ನನಗೂ ಭಾರೀ ನಂಟು ಬೆಳೆಯುತ್ತಿದೆ. ಅದು ಮತ್ತೆ ಮತ್ತೆ ನನ್ನ ಸ್ವಾಗತಿಸುತ್ತೆ, ಹೋಗುವ ಕಾರಣ ಏನೇ ಇದ್ರೂ, ಪ್ರತಿ ಬಾರಿಯೂ ವಿಭಿನ್ನವಾದ ಅನುಭವ ನೀಡುತ್ತಿದೆ. ಹೈದ್ರಾಬಾದ್‌ಗೆ ಹೋದ ತಕ್ಷಣ ನೆನಪಾಗೋದು ಅಲ್ಲಿನ ಬಿರ್ಯಾನಿ ಮತ್ತು ಇರಾನಿ ಚಹಾ. ಇವೆರಡನ್ನೂ ಸವಿಯದೇ ಹೋದ್ರೆ ಹೈದ್ರಾಬಾದ್‌ಗೆ ಹೋಗಿದ್ದೇ ದಂಡ ಅನ್ನಿಸಿದರೂ ತಪ್ಪಿಲ್ಲ. ಅದೆಷ್ಟೇ ತುರ್ತು ಸನ್ನಿವೇಶ ಇದ್ರೂ ಒಮ್ಮೆಯಾದ್ರೂ ಇವುಗಳನ್ನ ಸವಿಯದೇ ಹೋದ್ರೆ ಸಮಾಧಾನವೇ ಇರಲ್ಲ. ಹೈದ್ರಾಬಾದ್‌ ಹೈಕೊರ್ಟ್‌ ಮುಂದೆ ಒಂದು ಚಿಕ್ಕ ಟೀ ಸ್ಟಾಲ್, ಪುಟ್‌ಪಾತ್ ಬದಿಯ ಅಂಗಡಿಯಾದ್ರು ಯಾವ ಫೈವ್‌ ಸ್ಟಾರ್‌ ಹೋಟೆಲ್‌ಗೂ ಕಮ್ಮಿಯಿಲ್ಲದಂತೆ ಚಹಾ ಮಾಡ್ತಾನೆ. ಥೇನ್‌ ಮಾರುತಗಳ ಪ್ರಭಾವವೋ ಏನೋ ಅಂದು ಮೋಡ ಮುಸುಕಿದ ವಾತಾವರಣವಿತ್ತು. ತಂಪು ಹೊತ್ತಲಿ ಇರಾನಿ ಚಹಾ ಕುಡಿತಾ ಯಾರ್ಗೋ ಕಾಯ್ತಾ ಕುಳಿತಿದ್ವಿ. ಕಾಯೋದೆ ನಮ್ಮ ಕೆಲಸದ ಭಾಗ ಅಂತಾ ಎಷ್ಟೋ ಬಾರಿ ಅನ್ನಿಸಿದೆ.ಕಾಯಿಸುವವರನ್ನೂ ಯಾರು ಪ್ರೀತಿಸಬಾರದು ಅಂತಾರೆ, ಆದ್ರೆ ನಾವು ಕಾಯಿಸುವವರನ್ನ ದ್ವೇಷಿಸೋಕು ಆಗಲ್ಲ. ಅದರಲ್ಲೂ ಸಿಬಿಐ ಕಚೇರಿ, ಚಂಚಲಗುಡ ಜೈಲು, ಸಿಬಿಐ ಕೋರ್ಟ್‌ ನ ಮುಂದೆ ಕಾಯ್ದಿರೋದು ನನ್ನ ಮಟ್ಟಿಗೆ ಅದೇ ಸಾಹಸವೇ.
...

ಹೀಗೆ ಕಾಯ್ತಾ, ಚಹಾ ಕುಡಿಯುತ್ತಾ ನನ್ನ ದೃಷ್ಠಿ ಅದೇ ಪುಟ್‌ ಪಾತ್‌ ಮೇಲೆ ಕೂತಿದ್ದ ಚಪ್ಪಲಿ ಹೊಲಿಯುವವನ ಮೇಲೆ ಬಿತ್ತು. ಕುತೂಹಲದಿಂದ ಅವನನ್ನೇ ನೋಡ್ತಾಯಿದ್ದೆ. ಹೈಕೋರ್ಟ್‌ ಇದ್ರೂ ಅದು ಚಿಕ್ಕ ರಸ್ತೆ ಆಗಿದ್ರಿಂದ ವಾಹನ ದಟ್ಟಣೆಯೂ ಜಾಸ್ತಿಯಿತ್ತು. ರಸ್ತೆಯ ಮೇಲೆ ಹೋಗುವ ಬರುವ ಪ್ರತಿಯೊಬ್ಬರನ್ನ ನೋಡುತ್ತಾ ಕುಳಿತ್ತಿದ್ದ ಈ ಚಪ್ಪಲಿ ಹೊಲಿಯುವಾತ. ಅದ್ಯಾಕೆ ಹಾಗೆ ಜನರನ್ನ ನೋಡ್ತಾನೆ ಅನ್ನೋ ಕುತೂಹಲದೊಂದಿಗೆ ಸೂಕ್ಷ್ಮವಾಗಿ ಅವನ ಕಣ್ಣುಗಳನ್ನೇ ದಿಟ್ಟಿಸಿದೆ. ಅವನ ಕಣ್ಣಿನಲ್ಲಿ ಹಸಿವನ್ನ ನೀಗಿಸಿಕೊಳ್ಳುವ ಹುಡುಕಾಟ ಇತ್ತು. ಅರ್ಥಾತ್‌ ಆತ ನೋಡ್ತಾಯಿದ್ದಿದ್ದು ಚಪ್ಪಲಿಗಳನ್ನ. ಯಾರದ್ದೋ ಚಪ್ಪಲಿ ಹರಿದಿದ್ರೆ ಅದನ್ನ ಹೊಲಿದು ತನ್ನ ಹೊಟ್ಟೆ ತುಂಬಿಸಿಕೊಳ್ಳುವ ಹಪಾಹಪಿ ಅವನದ್ದು. ಆ ಕ್ಷಣಕ್ಕೆ ಅನ್ನಿಸಿದ್ದು “ ಹರಿದ ಚಪ್ಪಲಿ ಅವನ ಹಸಿವು ನೀಗಿಸುತ್ತೆ, ಹಾರುವ ಸುದ್ದಿ ನಮ್ಮ ಹಸಿವು ನೀಗಿಸುತ್ತೆ” ಅಂತಾ. ನಾವಿಬ್ಬರೂ ಮಾಡಿದ್ದೂ ಒಂದೇ ಅದೇ ಹುಡುಕಾಟ. ಅವನು ಚಪ್ಪಲಿ ಹುಡುಕಿದ, ನಾನು ಸುದ್ದಿ ಹುಡುಕಿದೆ. ಎಲ್ಲಾರು ಮಾಡೋದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಅನ್ನೋ ಹಾಡಿನ ಅರ್ಥಪೂರ್ಣ ಸಾಲುಗಳು ನೆನಪಾಗಿ ನನ್ನೊಳಗೆ ನಾ ನಕ್ಕು ಸುಮ್ಮನೇ ಹುಡುಕಾಟ ಮುಂದುವರೆಸಿದ್ವು. - ದಶರಥ್ ಬಿ ಎಲ್‌‌

3 ಕಾಮೆಂಟ್‌ಗಳು:

ದಯಾನಂದ ಹೇಳಿದರು...

ಹೊಟ್ಟೆ ತುಂಬಿದವರಿಗೆ ಅದನ್ನು ಮೀರಿದ ಏನೋನೋ ಯೋಚನೆಗಳು...ಆದರೆ ಹೊಟ್ಟೆ ತುಂಬಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಈ ಜಗತ್ತಿನದ್ದು...... ಚಪ್ಪಲಿ ಹೊಲೆಯುವುದೂ ಕಾಯಕವೇ, ಸುದ್ದಿಗಾಗಿ ಹುಡುಕಾಡುವುದೂ ಕಾಯಕವೇ..., ಆದರೆ 'ಸುದ್ದಿ ಮಾಡುವುದು' ಕೆಟ್ಟ ಕೆಲಸ, ಅದನ್ನು ಮಾತ್ರ ಮಾಡಬೇಡ.. ಅನಿವಾರ್ಯಕ್ಕಾಗಿ ಸುದ್ದಿ 'ಸೃಷ್ಟಿ'ಸುವ ಕೆಟ್ಟ ಗುಣಗಳು ನಿನ್ನಲ್ಲೂ ಇವೆ. ಅವನ್ನು ತೆಗೆದು ಹಾಕುವುದು ಒಳಿತು..

'ವಾಸ್ತವಾಂಶಗಳು ಪವಿತ್ರವಾದಂಥವು'
ಮರೆಯಬೇಡ.......

ಬರಹದ ವಿಚಾರಕ್ಕೆ---
ಇನ್ನೂ ಆಳಕ್ಕಿಳಿಯಬೇಕು.. ಚಪ್ಪಲಿ ಹೊಲೆಯುವ ಕಾಯಕದ ಹೊರಗೆ ನಿಂತು ನೋಡುವುದಕ್ಕಿಂಥಾ ಅವನ ತಹತಹಗಳನ್ನು ಗ್ರಹಿಸಬೇಕಿತ್ತು. ಅದು ಬರವಣಿಗೆಯಲ್ಲಿ ಕಾಣುತ್ತಿಲ್ಲ... ಎಲ್ಲ ಕೆಲಸಗಳನ್ನೂ ಮೀರಿದ ಬದುಕಿನ ಬಗ್ಗೆ ಪ್ರಾಮಾಣಿಕವಾಗಿ ಧ್ಯಾನಿಸುವ ಶಕ್ತಿ ದೊರಕಲಿ....

ಹಿಂದಿನ ಬರವಣಿಗೆಗಳಲ್ಲಿ ಕಾಣಿಸುವ ಬರಹದ ಪ್ರಾಮಾಣಿಕತೆ ಈ ಬರಹದಲ್ಲಿ ಕಾಣುತ್ತಿಲ್ಲ. ಅವಸರದ ಬರಹಕ್ಕೆ ಶರಣಾಗುವುದು ಬೇಡ.. ಬರವಣಿಗೆ ಧ್ಯಾನ ಎಂಬ ಸತ್ಯ ಮರೆಯಬೇಡ..

ಸಿಟ್ಟಾಗುವ ಅಗತ್ಯವಿಲ್ಲ....

ನಿನ್ನ
ದಯಾನಂದ

ಮರಿದೇವ ಹೂಗಾರ ಹೇಳಿದರು...

ಬದುಕು ಬರಹ ಒಂದೇ. ಆದ್ರೆ ಹುಡುಕಾಟದ ತುಡಿತಕ್ಕೆ ಎಣೆಯಿಲ್ಲ. ನೀನು ಕೂಲಿ ಅವ್ನು ಮಾಲಕ. ನೀನು ಇಂತಿಷ್ಟು ಅಂತ ದುಡಿಯಲೇಬೇಕು, ಅವ್ನು ಹಾಗಲ್ಲ ತಾ ಕರೆಯದಿದ್ರೂ ಹರಿದುಕೊಂಡವ ಬರ್ತಾನೆ ಅನ್ನೋ ನಂಬಿಕೆಯಿದೆ. ಗೇಣು ಹೊಟ್ಟೆಗಾಗಿ ಮಾಡೋದು ನಿಜ. ಇನ್ನೊಂದು ಹೊಟ್ಟೆ ತುಂಬಿಸಿಕೊಳ್ಳುವ ಕಾತರ ಇನ್ನೊಬ್ರಿಗೂ ಇರುತ್ತೆ. ಸಾಹುಕಾರ ಮತ್ತು ನೌಕರರ ಮಧ್ಯೆ ಇರುವ ವ್ಯತ್ಯಾಸಗಳು ಜಾಸ್ತಿ. ಹೋಗ್ಲಿ ಹುಡುಕಾಟ ಚನ್ನಾಗಿದೆ. ಬದುಕಿಗಂಟಿಕೊಂಡ ಸತ್ಯಗಳು ಅವ್ರವ್ರ ದೇಹದಲ್ಲಿ ಗೊತ್ತಾಗ್ತವೆ. ನೀನು ಏನೋ ಮಾಡ್ತಿಯಾ ಅವ್ರು ಏನ್ ಮಾಡ್ಬೇಕು ಅದು ಮಾಡ್ತಾರೆ. ಭಿನ್ನರುಚಿ ಎಲ್ರದೂ ಅಲ್ವಾ.......!

ಜಿ ಎನ್ ಮೋಹನ್ ಹೇಳಿದರು...

very good, keep it up