ಗುರುವಾರ, ಮೇ 26, 2011
ದಾರಿ ಯಾವುದಯ್ಯ ಜೀವನಕೆ.........?
ಗುಳೆ ಹೊರಟ ಬದುಕಲ್ಲಿ ನಿತ್ಯವೂ ನೆಲೆ ನಿಲ್ಲುವ ತವಕ. ಅವಕಾಶ ಯಾವ ದಿಕ್ಕಿನಿಂದಾದರೂ ಹರಿದು ಬರುವುದೆಂಬ ಸದಾಭಿಲಾಷೆ. ನೂರು ದಾರಿಯುದ್ದಕ್ಕೂ ನಡೆದು ನಡೆದು ಸೋತು ಬಂದಿರುವೆ. ಇನ್ನು ಮೂರು ಹೆಜ್ಜೆ ನಡೆಯಲಾರೆನಾ? ಖಂಡಿತ ಈ ಮೂರು ಮೂರು ಹೆಜ್ಜೆ ಸೇರಿ ನೂರಾಗಿವೆ. ಒಂದು ದಾರಿ ಮತ್ತೊಂದು ದಾರಿಗಿಂತ ವಿಭಿನ್ನ, ವಿಶಿಷ್ಟ. ದಾರಿಯುದ್ದಕ್ಕೂ ನಡೆಯುವಾಗ ಎಷ್ಟೊಂದು ಕಲ್ಲು ಮುಳ್ಳುಗಳು ನನ್ನನ್ನು ನೋಯಿಸಿ ತಾವು ನೊಂದುಕೊಂಡಿವೆ. ಇನ್ನು ಮುಂದಿನ ದಾರಿಗಳಲ್ಲಿಯೂ ಇದು ತಪ್ಪಿದ್ದಲ್ಲ. ಆದರೆ ಹಿಂದಿನ ಕಲ್ಲುಮುಳ್ಳುಗಳು ಈಗ ನೆನಪುಗಳು. ಇವು ಮುಳ್ಳುಗಳ ಬಗ್ಗೆ ಇದ್ದ ಭಯವನ್ನು ದೂರವಾಗಿಸಿವೆ. ಹಾಗೆಂದ ಮಾತ್ರಕ್ಕೆ ಇನ್ನು ನಿರ್ಭಿಡೆಯಿಂದ ಮುನ್ನುಗ್ಗುತ್ತೇನೆಂದು ಹೇಳುವುದು ಕಷ್ಟವೇ. ಯಾಕೆಂದರೆ ಈ ಮುಳ್ಳುಗಳಲ್ಲಿ ಅನೇಕ ವಿಧ. ಕೆಲವು ನೇರವಾಗಿ ಘಾಸಿಗೊಳಿಸಿದರೆ ಇನ್ನು ಕೆಲವು ವಿಚಿತ್ರ ಮತ್ತು ವಿಕೃತ ಮುಳ್ಳುಗಳಿರುತ್ತವೆ. ಒಂಥರಾ ಬಾರೆಮುಳ್ಳಿನಂತೆ ಹಿತ್ತಲ ಬಾಗಿಲಿನಿಂದಲೇ ಇರಿದುಬಿಡುತ್ತವೆ.
ಈ ಇರಿತ ಮೊರೆತ ಆ ಕ್ಷಣಕ್ಕೆ ನೋವು ಕೊಟ್ಟರೂ ಪ್ರತಿಯೊಂದು ಒಂದೊಂದು ಪಾಠ ಕಲಿಸಿಹೋಗುತ್ತವೆ. ಅದರಲ್ಲಿ ಮೊದಲ ಪ್ರಭೇದ ಅಡ್ಡದಾರಿ ತುಳಿಯದಿರು, ತಪ್ಪು ಹೆಜ್ಜೆ ಇಟ್ಟರೆ ನೋವೆ ಗತಿ ಎಂದು ಎಚ್ಚರಿಸುತ್ತದೆ. ಎರಡನೇ ಪ್ರಭೇದ ಇದು ಒಂಥರಾ ಎಡಬಿಡಂಗಿ ಹಾಗೂ ಎಡವಟ್ಟು ಕೊಂಕು ಮುಳ್ಳು. ಇದನ್ನು ನೋಡಿದ್ರೆ ಇದರ ಬಗ್ಗೆ ಭಯ ಉಂಟಾಗುವುದೆ ಇಲ್ಲ. ಅದೇನು ಮಾಡೀತು ಎಂಬ ನಿರ್ಲಕ್ಷ್ಯಮೂಡುತ್ತದೆ. ಎಂಥ ಸಂಧರ್ಭ ಬಂದರೂ ಇದು ತನ್ನ ಸ್ವಭಾವ, ಗುಣ ತೋರ್ಪಡಿಸುವುದಿಲ್ಲ. ಅವಕಾಶಕ್ಕೆ ಹೊಂಚು ಹಾಕಿ ಕುಳಿತು ಘಾಸಿಗೊಳಿಸುತ್ತದೆ. ನಂಜು ತುಂಬಿದ ಈ ಎರಡು ತಲೆ ಹಾವಿನ ಗುಣವುಳ್ಳವರು ಎಲ್ಲಾ ದಾರಿಗಳಲ್ಲಿಯೂ ಸಹಜ ಮತ್ತು ಸರ್ವಕಾಲಿಕ. ರಕ್ತಬಿಜಾಸುರನಂತೆ ತಾನಳಿದರೂ ತನ್ನಂತಹ ಸಂತತಿಯನ್ನು ಬಿಟ್ಟು ಹೋಗುತ್ತಾರೆ. ಮಲಗಿದ ಸರ್ಪವನ್ನುಕೆಣಕಬಹುದು , ನಗುವ ಸೋಗು ಧರಿಸಿದ ಇಂತಹವರನ್ನು ನಂಬಲು ಸಾಧ್ಯವಿಲ್ಲ.
ಆದರೂ ನನಗೆಲ್ಲವೂ ಗೊತ್ತು, ಮುಳ್ಳುಗಳ ಇತಿಹಾಸ , ಸ್ವಭಾವ, ಕುಹಕಗಳ ತಲೆ ಬುಡ ಗೊತ್ತು ಎಂದು ಬೀಗಿದವರೇ ಇದಕ್ಕೆ ಬಲಿಯಾಗುತ್ತಿರುವುದೇ ವಿಪರ್ಯಾಸ ಮತ್ತು ಬೇಸರದ ಸಂಗತಿ. ಗೊತ್ತಿದ್ದರೂ ಮುಳ್ಳಿನ ರಾಶಿಯನ್ನೆ ಕಿರೀಟದಂತೆ ತಲೆ ಮೇಲೆ ಹೊತ್ತು ತಿರುಗುತ್ತಾರೆ. ಕಿರೀಟವೇ ಇವರ ಕೊರಳಿಗೆ ಉರುಲು ಅಂತ ಗೊತ್ತಾಗುವ ವೇಳೆಗೆ ಅದರ ವಿರುದ್ಧ ಪ್ರತಿಭಟಿಸುವ, ಅದನ್ನು ಕಿತ್ತುಹಾಕುವ ಶಕ್ತಿ ಕುಂದಿಹೋಗಿರುತ್ತದೆ. ಅಷ್ಟರ ಮಟ್ಟಿಗೆ ಜರ್ಜರಿತಗೊಳಿಸಿರುತ್ತದೆ.
ಈ ದಾರಿಯಲ್ಲಿ ಇನ್ನೂ ಮುನ್ನಡೆಯಲಾರೆ, ಈ ಕೊಳಕು ಮುಳ್ಳುಗಳ ಸಹವಾಸ ಮತ್ತೆ ಮಾಡಲಾರೆ , ಈ ಅರ್ಧದಾರಿಯಲ್ಲೇ ಹಿಂದುರಿಗಿದರೂ ತೊಂದರೆ ಇಲ್ಲ ಅಥವಾ ಇದ್ದಲ್ಲೇ ಇರುವೆ ಎಂದರೂ ಇವು ಬಿಡವು. ಜೇಡರ ಬಲೆಯಂತೆ ಮುಳ್ಳಿನ ಬಲೆಯಿಂದ ಹೆಕ್ಕಿ ಹೊರಹಾಕುತ್ತವೆ.
ಇಲ್ಲಿ ಬದುಕಬೇಕಾದರೆ ಮುಳ್ಳುಗಳ ಸರ್ವನಾಶ ಮಾಡಬೇಕು ಇಲ್ಲವಾದರೆ ನಾವೇ ಸಂಪೂರ್ಣ ಶರಣಾಗಬೇಕು. ಇದೆಲ್ಲಾ ಸಾಧ್ಯವಾಗುವುದು ಈಗಂತೂ ಸಾಧ್ಯವಿಲ್ಲ. ಹಾಗಾದರೆ ದಾರಿ ಯಾವುದಯ್ಯ ಜೀವನಕೆ.........? `
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
3 ಕಾಮೆಂಟ್‌ಗಳು:
Where the Sidewalk Ends
by Shel Silverstein
There is a place where the sidewalk ends
And before the street begins,
And there the grass grows soft and white,
And there the sun burns crimson bright,
And there the moon-bird rests from his flight
To cool in the peppermint wind.
Let us leave this place where the smoke blows black
And the dark street winds and bends.
Past the pits where the asphalt flowers grow
We shall walk with a walk that is measured and slow,
And watch where the chalk-white arrows go
To the place where the sidewalk ends.
Yes we'll walk with a walk that is measured and slow,
And we'll go where the chalk-white arrows go,
For the children, they mark, and the children, they know
The place where the sidewalk ends.
ಪ್ರೀತಿಯ ದಶ,
ಇದು ನಾನು ಇತ್ತೀಚಿಗೆ ಓದಿದ ಹೊಸ ಕವಿತೆ. ಇಂಗ್ಲೀಷಿನಲ್ಲಿ ತುಂಬಾ ಸರಳವಾಗಿ ಓದಿಸಿಕೊಳ್ಳುವ, ಆದರೂ ಕಾಡುವ ಕವಿತೆ ಇದು. ನೀನು ನಿನ್ನ ಬರಹ ‘ದಾರಿಯಾವುದಯ್ಯ ಜೀವನಕ್ಕೆ?’ ನಾನು ಓದಿಲ್ಲ ಎಂದು ತಿಳಿದುಕೊಂಡಿರುವಂತಿದೆ. ಆದರೆ ನಿನ್ನ ಈ ಬರಹವನ್ನು ಸುಮಾರು ದಿನಗಳ ಹಿಂದೆಯೇ ಓದಿದ್ದೇನೆ. ಆದರೆ ಪ್ರತಿಕ್ರಿಯಿಸಲಾಗಿರಲಿಲ್ಲ. ಈ ಇಲ್ಲಿನ ಕವಿತೆಯನ್ನು ಎರದು ಬಾರಿ ಓದು. ನಿನ್ನ ತುಮುಲಕ್ಕೆ ಸ್ವಲ್ಪ ನೆಮ್ಮದಿ ಸಿಕ್ಕೀತು. ಯಾಕೆಂದರೆ ನೀನು ಹೇಳುವ ಮುಳ್ಳು ಗಂಟಿಗಳು ಎಲ್ಲೆಡೆಯೂ ಇರುವಂಥವೇ ... ಅಥವಾ ಈ ಜೀವನದ ದಾರಿಯೇ ಮುಳ್ಳುಗಂಟಿಗಳಿಮದ ಕೂಡಿದ್ದು. ವೃತ್ತಿ ಬದುಕಿಗಾಗಿ ತುಂಬಾ ತಲೆಕೆಡಿಸಿಕೊಳ್ಳಬೇಕಾದ ಅಗತ್ಯ ಇಲ್ಲ. ಕಳೆದ ಭಾನುವಾರ ಕಥೆಗಾರ ಕೇಶವ ಮಳಗಿಯವರೊಂದಿಗೆ ಮಾತನಾಡುತ್ತಿದ್ದೆ. ಈ ಮನುಷ್ಯ ವೃತ್ತಿಯ ಬಗ್ಗೆ ತಲೆಕೆಡಿಸಿಕೊಳ್ಳದೇ ಇರುವ ಬಗೆ ನನ್ನಲ್ಲಿ ಅಚ್ಚರಿ ಹುಟ್ಟಿಸುತ್ತದೆ. ಯಾಕೆಂದರೆ ಮಳಗಿಗೆ ಜೀವನ, ಪ್ರವೃತ್ತಿಯ ಪ್ರಪಂಚ ಅತಿ ಮುಖ್ಯವಾಗಿದೆ. ನಾನು ಕೆಲಸಗಾರ ಹೌದು, ಆದರೆ ನಾನು ಕೇವಲ ಕೆಲಸಗಾರನಲ್ಲ, ಅಥವಾ ಕೆಲಸವೇ ನನ್ನ ಪಾರಮಾರ್ಥವಲ್ಲ ಎಂಬ ಚಿಂತನೆ ನನಗೂ ಹಿಡಿಸುತ್ತದೆ. ಆದರೂ ನನ್ನ ಕೆಲಸದಲ್ಲಿ ಅಷ್ಟು ನಿರಾಳತನ ಅಲಭ್ಯ ಎಂಬ ಅರಿವೂ ನನಗಿದೆ. ನಾನು ಚಾನೆಲ್ ಸೇರುವಾಗಲೇ ಹೇಳಿದಂತೆ ನನಗೆ ಇಲ್ಲಿಗಿನ್ನು ಸಾಕು ಎನಿಸಿದ ಯಾವುದೇ ಘಳಿಗೆಯಲ್ಲಿ ನಾನು ಚಾನೆಲ್ ಬಿಟ್ಟು, ನನ್ನ ಊರಿಗೆ ನಡೆದು ಬಿಡಲು ಸಿದ್ಧ... ಆದರೂ ಜೀವನಕ್ಕೆ ಭರವಸೆ ಅಗತ್ಯ. ‘ನಾಳೆ ನನ್ನದೇ ಎಂಬ ನಂಬಿಕೆ’ ನನ್ನದು. ಹೀಗಾಗಿ ನಿತ್ಯವೂ ನೂತನ ಎಂದುಕೊಳ್ಳುತ್ತಲೇ ದಿನ ಕಳೆಯುವುದು ಅನಿವಾರ್ಯ. ಯಾಕೆಂದರೆ ಸಾಯುವ ವರೆಗಾದರೂ ನಾವು ಬದುಕಲೇ ಬೇಕು!!!
ನಿನ್ನವ ದಯಾನಂದ.
ದಶ`ರಥ` ಹೊಡೆಯೋದಕ್ಕೆ ದಾರಿ ಯಾವುದು ಅಂತ ಪ್ರಶ್ನೆ ಮಾಡಿದ್ದಾರೆ. ದಾರಿ ಯಾವುದು ಅಂತ ಗೊತ್ತಿದೆ. ಅದಕ್ಕೆ ಪೂರಕವಾಗಿ ಮಾಹಿತಿ ಕೂಡ ನೀಡಿದ್ದಾರೆ. ಆದ್ರೆ ದಾರಿ ಅಂದ್ಮೇಲೆ ಇವೆಲ್ಲಾ ಮಾಮೂಲು. ನಿರ್ದಿಷ್ಟ ಗುರಿ ತಲುಪುವವನ ಚಂಚಲತೆ ಸಹಜ ಅಷ್ಟೇ ಕುತೂಹಲ. ಇವರೆಡನ್ನೂ ಆಸ್ವಾದಿಸುತ್ತಾ ನೆಗೆಯುವಾಗ ನೆಗೆದು, ಸಾವರಿಸಿಕೊಂಡು ಹೋಗುವಾಗ ಮಗದೊಂದು ಮಾಡುತ್ತ ದಾರಿಗೆ ಹೋಗ್ಲೇಬೇಕು. ಅಂತಹ ದಾರಿಯಲ್ಲಿ ದಶ`ರಥ`(ದ)ನ ನಡೆ. ಇಂಥವ್ರಾದ್ರೂ ಧೀರರಿದ್ದಾರಲ್ಲ ಇದ್ದ ದಾರಿ ಮುಚ್ಚಿದಾಗ ಬಯಲುಗೊಳಿಸಿ ಮುನ್ನಗ್ಗುವವ್ರು. ಹೀಗಿದ್ದಾಗ ದಶ ದಿಕ್ಕುಗಳ ದಾರಿ ಕಾಣೋದು, ರಥ ಹೊಡೆಯೋದಕ್ಕೆ ಸಾಧ್ಯವಾಗೋದು.
ಮರಿದೇವ ಹೂಗಾರ
ರಾಯಚೂರು.
ಬದುಕೇ ಹಾಗೇ.... ಜಿಡ್ಡುಗಟ್ಟುಬಾರದು.. ನಿರಂತರ ಬದಲಾವಣೆಗಳ ಹರಿವಿನಲ್ಲಿರುವ ನಮಗೆ ಹಳೆಯ ದಾರಿ ಕೇವಲ ನೆನಪು... ಹೊಸ ಹಾದಿಯಲ್ಲೊಂದು ಕನಸು... ಆ ದಾರಿಯಲ್ಲೊಂದು ಉತ್ಸಾಹ ಮೊಳಕೆಯೊಡೆಯಬೇಕು.. ಆಗ ಮಾತ್ರ ಅದಕ್ಕೊಂದು ಹುಮ್ಮಸ್ಸು... ನಮ್ಮ ಕಾಲುಗಳಿಗೆ ನಿರಂತರ ಚೈತನ್ಯವಿರಬೇಕು... ಪ್ರತೀ ತಿರುವಿನಲ್ಲೂ ಮುನ್ನುಗ್ಗುವ ತಾಕತ್ತು ಉಳಿಸಿಕೊಳ್ಳಬೇಕು.. ಯಶಸ್ಸು ಅಂದ್ರೆ ಸುಮ್ಮನೆ ಮಾತಲ್ಲ... ಅದು ನಿರಂತರ ಪ್ರಯತ್ನದ ಫಲ.. ಹಾಗಂತ ಯಶಸ್ಸು ಸಿಕ್ಕ ಮಾತ್ರಕ್ಕೆ ದಾರಿ ಮುಗಿಯುವುದಿಲ್ಲ, ಅದು ನಡೆದಷ್ಟೂ ದೂರ ದೂರ... ಅಲ್ಲಿನ ಏರಿಳಿತಗಳು ಸಾರ್ಥಕ್ಯದೆಡೆಗೆ ಕೊಂಡೊಯ್ಯಬೇಕು.... ಪ್ರತೀ ಹೆಜ್ಜೆಯಲ್ಲೂ ಉಳಿಸಿಕೊಳ್ಳಬೇಕಾದುದು, ತಣ್ಣನೆಯ ಭಾವ, ಬೆಚ್ಚನೆಯ ಪ್ರೀತಿ, ಕನಸು ಕಾಣುವ ಕಂಗಳು, ಒಗ್ಗಿಕೊಳ್ಳುವ ದೇಹ-ಮನಸ್ಸು.... ತಲುಪಬೇಕಾದದ್ದು ಕೇವಲ ತುದಿಯಲ್ಲ, ತುತ್ತತುದಿ...
-ಅಮೃತಾ ಪಾಟೀಲ್.....
ಕಾಮೆಂಟ್ ಪೋಸ್ಟ್ ಮಾಡಿ