ಬುಧವಾರ, ಫೆಬ್ರವರಿ 3, 2016

ಬರೆಯಲಿಲ್ಲ ಹಾಡಲಿಲ್ಲ...


ಬರೆಯಲಿಲ್ಲ ಹಾಡಲಿಲ್ಲ ನನ್ನೆದೆಯ ಕನವರಿಕೆಗಳ
ತುಟಿಯ ಮೊದಲಾರ್ಧದಿ ನಿಂತು
ಉನ್ಮಾದದಿ ತುಡಿದ ತುಡಿತಗಳ..

ಎದೆಯ ಬಿರಿಯೇ ಉಕ್ಕಿ ಹರಿವ,
ಕಣ್ಣ ಹನಿಯ ಜಿನುಗಿಸಿರುವ
ತಡೆಹಿಡಿದೆ ಅರಿವಿಲ್ಲದೆ ಆ ಸುಂದರ ಭಾವಗಳ..


ಬರೆಯಲಿಡಿದ ಶಾಹಿ ಕೂಡ
ನುಂಗಿ ಹಾಕಿರುವ
ಮನಸ ಕೊರೆವ ಆ ಮೊರೆತಗಳ..

ಬರೆಯಲೆಂತೋ ಮರೆಯಲೆಂತೋ
ಮನದೊಳಗೆ ಮಂದಗಾಮಿಯಾಗಿ,
ಆಗಾಗ ಅಪ್ಪಳಿಸುವ ಆ ಅಲೆಗಳ...

ಮಂಗಳವಾರ, ಜನವರಿ 26, 2016

ಕಡಲ ತೀರದಿ ಕೈ ಹಿಡಿದು ನಡೆದಾಗ...



 
ಸುಂದರ ಸಂಜೆಯೊಂದನ್ನ ಕಾಣದ ಕಡಲ ತಡಿಯಲ್ಲಿ ಕುಳಿತುಕೊಂಡು ಆಸ್ವಾದಿಸೋ ತುಡಿತ. ಆ ಸೂರ್ಯ ಕಡಲಿನ ಮಡಿಲು ಸೇರುವ ಅನನ್ಯ ಇಳಿಸಂಜೆಯನ್ನ ಏಕಾಂತದಿ ಕಣ್ತುಂಬಿಕೊಳ್ಳೋ ತವಕ. ನನ್ನನ್ನೂ ಸೇರಿದಂತೆ ಯಾರ ಹಿಡಿತಕ್ಕೂ ಸಿಗದ ಈ ಮಾಯಾಮರ್ಕಟ ನನ್ನ ಮನಸ್ಸು ಧ್ಯಾನಸ್ಥನಾಗಬೇಕೆಂಬ ಉದ್ಘಾರದ ಉತ್ಕಟತನ. ಧ್ಯಾನಿಯಂತೆ ಮೌನಿಯಾಗಿ ಮನಸ್ಸಲ್ಲೇ ಅಳಿದುಳಿದ ಭವ-ಭಾವನೆಗಳ ಬಡಿದಾಟಕ್ಕೆ, ತೀರದ ತಾಕಲಾಟಕ್ಕೆ ತೀರದಿ ಕುಳಿತು ತಾತ್ಪರ್ಯ ಹುಡುಕುವಲ್ಲಿ ನಿರತನಾಗಬೇಕೆಂಬ ವೈರಾಗ್ಯಭಾವ. ಈ ವೈರಾಗ್ಯಭಾವ ಆಗಾಗ ಮನದ ಕಡಲಿಗೆ ಜೋರಾಗಿಯೇ ಅಪ್ಪಳಿಸಿದೆ, ಅಷ್ಟೇ ವೇಗವಾಗಿ ಹಿಂದುರಿಗಿದ್ದೂ ಇದೆ. ಕಡಲಿಗೂ ಸೇರದ, ದಡಕ್ಕೂ ಬಾರದವುಗಳು ಕೆಲವು ಕೂಡ. ಇಂತಹ ಸಂದಿಗ್ಧತೆಯಲ್ಲಿ ಮನಸ್ಸು ಸಾಗುತ್ತಿರುವಾಗಲೇ, ಸಂದಿಗ್ಧತೆಗೆ ಸಮಾರೋಪ ಹಾಡಿ ಸುಂದರ ಕನಸುಗಳ ಬಿತ್ತುವ ಭುವಿಯಾಯ್ತು ಮನಸ್ಸು.

 
ತವಕ-ಕುಹಕಗಳೇನೇ ಇದ್ದರೂ ಭುವಿಯಲ್ಲಿ ಹಸಿರ ಕನಸುಗಳು ಚಿಗುರೊಡೆದ್ವು. ಬರುಡಾಗಿದ್ದ ಬಂಜರು ಬದುಕಲ್ಲಿ ಬಂಗಾರದ ಪ್ರೀತಿ ಮೊಳಕೆಯೊಡೆದು, ಮನಕೆ ತಂಗಾಳಿ ಬೀಸಿದಂತಾಯ್ತು. ಮನದಲ್ಲಿ ಹುದುಗಿದ್ದ ವೈರಾಗ್ಯಕ್ಕೀಗ ದೂರಹೋಗದೇ ವಿಧಿಯಿಲ್ಲ. ಬಹುದೂರ ಸಾಗಿ ಬಂದಿರುವ ಪ್ರೀತಿ ಪಯಣದ ಒಂದೊಂದು ಹೆಜ್ಜೆಯೂ ಅಚ್ಚಳಿಸದಂತೆ ಅಚ್ಚಾಗಿವೆ. ಸ್ವಚ್ಛ ಮನಸ್ಸಿನ ಮುಗ್ಧ ಪ್ರೀತಿ ಸಿಕ್ಕಿದ್ದು ಮಾಮೂಲಿಯ ಮಾತು ಅಲ್ಲವೇ ಅಲ್ಲ. ಅವಳೊಂದಿಗೆ ಕಳೆದ ಅದ್ಭುತ ಕ್ಷಣಗಳ ದೊಡ್ಡ ರಾಶಿಯನ್ನ ಮನ ಕಣದಲ್ಲಿ ಹಾಗೆಯೇ ಜೋಪಾನವಾಗಿ ಇಟ್ಟಿದ್ದೇನೆ. ಅಮ್ಮನ ಅಕ್ಕರೆಯಷ್ಟೇ ಪರಿಶುದ್ಧವಾದ ಅಪ್ಪುಗೆ, ಮುದ್ದಾದ ಮಾತು, ಮನದಿಂಗಿತಗಳ ತುಲಾಭಾರ ಮೈಮನಗಳಲ್ಲಿ ಎಂದಿಗೂ ಪುಳಕ ಸೃಷ್ಟಿಸುವಂತಹದ್ದು. ಜೀವನದ ಸಂಧ್ಯಾಕಾಲಕ್ಕೂ ಸಿಹಿ ಉಣಬಡಿಸುವ, ಮೊಗದಲ್ಲಿ ಚಿಕ್ಕದೊಂದು ಮಂದಹಾಸ ಮೂಡಿಸುವ ಸವಿ ನೆನಪುಗಳವು. ಅರಳು ಮರಳಾದ್ರು.., ಅರೆ ಬರೆ ಬೆಂದರೂ... ಮರಳಲ್ಲಿ ಮನಸು ಬಿಚ್ಚಿ ಹಾರಾಡಿದ್ದ ನೆನಪುಗಳು ಅಚ್ಚಳಿಯದೇ ಅಜರಾಮರ.

ಎಂದೂ ಮರೆಯದ ನೆನಪುಗಳ ಆಗರದಲ್ಲಿ ಅಪ್ಪಳಿಸುವ ಕಡಲತಡಿಯ ಆ ನೆನಪುಗಳ ಹಿಡಿದಿಡುವ ಶಬ್ದಗಳು ಪ್ರಾಯಶಃ ಸಿಗಲು ಸಾಧ್ಯವಿಲ್ಲ. ಅದೊಂದು ಸುಂದರ ಇಳಿ ಸಂಜೆ, ಕಡಲಪ್ಪಳಿಸುತ್ತಿದ್ದ ಅಲೆಗಳು ಅಕ್ಕರೆಯಿಂದ ನಮ್ಮನ್ನ ಆಹ್ವಾನಿಸಿದಂತೆ ಭಾಸವಾಯ್ತು. ಮರಳಿನ ರಾಶಿಯಲ್ಲಿ ಹೆಜ್ಜೆ ಹಾಕುತ್ತಾ ನನ್ನವಳ ಕೈ ಹಿಡಿದುಕೊಂಡು ತೀರದಿ ಬಹುದೂರ ನಡೆದು ಹೋಗೋಣ ಎನ್ನುವ ಅವಸರ ನನ್ನದು. ಆಗಷ್ಟೇ ನಮ್ಮ ಪ್ರೀತಿಯನ್ನ ಕಂಡ ಸೂರ್ಯ ನಾಚಿಕೊಂಡು ಕೆಂಬಣ್ಣಕ್ಕೆ ತಿರುಗಿದ್ದ. ಇನ್ನೊಂದು ಗೇಣುದ್ದ ಮಾತ್ರ, ಕಡಲಿನ ಮಡಿಲಿಗೆ ಜಾರಲು. ನನ್ನವಳೊಂದಿಗೆ ಸಮುದ್ರದಂಚಿಗೆ ನಿಂತುಬಿಟ್ಟಿದ್ದೆ. ಇಬ್ಬರ ದೃಷ್ಟಿಯೂ ಕೆಂಪು ಸೂರ್ಯ, ನೀಲಿ ಕಡಲನು ಸ್ಪರ್ಶಿಸುವ ಅದ್ಭುತ ಕ್ಷಣಕ್ಕೆ ನಾವು ಸಾಕ್ಷಿಯಾದೆವು. ಹೊನ್ನರಾಶಿಯಲಿ ದಿನಕರ ದಿನದಾಟ ಮುಗಿಸಿ ಹೊರಟ ಹೊತ್ತಿನಲ್ಲಿ, ನಮ್ಮ ಜೀವನದ ಬೆಳಕು ಹೊತ್ತಿಸುವ ಹುಮ್ಮಸ್ಸು ನಮ್ಮದು. ಇಬ್ಬರೂ ಒಬ್ಬರನ್ನೊಬ್ಬರು ರೆಪ್ಪೆಬಡಿಯದಂತೆ ನೋಡಿದೆವು, ದಿಗಂತದೆಡೆಗೆ ಮನಸ್ಸು ಮೂಕ ವಿಸ್ಮಿತವಾಗಿತ್ತು. ಸೂರ್ಯ ನೀಲಿಕಡಲ ಮನೆಯೊಳಗೆ ಬೆಚ್ಚಗೆ ಸೇರಿಬಿಟ್ಟ. ಮನಸ್ಸಿನಲ್ಲಿ ಇಬ್ಬರಿಗೂ ಏನೋ ಕಳೆದುಹೋದಂತಾಯ್ತು.

                                                 ಸೂರ್ಯಾಸ್ತದ ಮರುಕ್ಷಣವೇ ಅಲ್ಲಿಂದ ಕಾಲ್ಕಿತ್ತವಳು ಓಟ ಆರಂಭಿಸಿಯೇ ಬಿಟ್ಟಳು. ಮರಳಿನ ಹಾದಿಯಲ್ಲಿ ಒಂದು ಚಿಕ್ಕ ರನ್ನಿಂಗ್ ರೇಸ್ ಏರ್ಪಟ್ಟಿತ್ತು, ನನ್ನನ್ನು ಹಿಂದೆ ಹಾಕು ಎನ್ನುವ ಸವಾಲು ಕೂಡ. ಮನಸ್ಸು ಬಯಸಿದಂತೆ ಮರಳಿನ ಮಡಿಲಲ್ಲಿ ಮಕ್ಕಳಾದ ನಾವು ಅಲ್ಲಿ ಆಡಿದ್ದೇ ಆಟ, ನೀರಿನಲ್ಲಿ ಬಿದ್ದು ಒದ್ದೆಯೂ ಕೂಡ.
ಬಟ್ಟೆಯಷ್ಟೇ ಅಲ್ಲ, ಇಬ್ಬರ ಕಣ್ಣುಗಳು ಭಾವುಕತೆಯಿಂದ ಒದ್ದೆಯಾಗಿದ್ದವು. ಇಬ್ಬರೂ ಮೌನವಾಗಿಯೇ ಬಂದ ದಾರಿಯಲ್ಲಿ ಸಾಗಿದೆವು. ಕಡಲೇ ಮನಸ್ಸಿನ ಮಾತುಗಳಿಗೆ ವೇದಿಕೆಯಾಯ್ತು. ಕನಸು, ತುಮುಲ, ಭವಿಷ್ಯದ ಹಾದಿಯನ್ನ ಹುಡುಕುತ್ತಲೇ ಮರಳಹಾದಿ ಸವೆಸಿದ್ವು. ಎಲ್ಲೂ ಮಾತಿಲ್ಲ, ಕತೆಯಿಲ್ಲಬರೀ ಮೌನದಿ ಸಾಗಬೇಕು, ಹೀಗೆ ಸಾಗುವಾಗ  ಮನಸ್ಸಿನ ಮಾತುಗಳಿಗೆ ಕಡಲೇ ವೇದಿಕೆಯಾಗಲಿ ಅನ್ನೋದು ನನ್ನ ಆಸೆಯಾಗಿತ್ತು ಕೂಡ. ತಕ್ಷಣಕ್ಕೆ ನಾನಂದುಕೊಂಡಿದ್ದ ಮೌನಿಯಂತೆ ಕಡಲ ತಡಿಯಲ್ಲಿ ಧ್ಯಾನಿಯಾಗಬೇಕೆಂಬ ಮಾತು ನೆನಪಾಗಿದ್ದು. ಅಂದು ಕಳೆದ ಇಳಿಸಂಜೆಯಲ್ಲಿ ಮುಳುಗಿದ ಸೂರ್ಯ ಈಗಲೂ ನಮ್ಮ ಮನಸ್ಸಲ್ಲಿ ನಿತ್ಯವೂ ಅರಳುತ್ತಿದ್ದಾನೆ. ಮರಳಿ ಮರಳಿ ಮರಳಿನ ರಾಶಿಯಲ್ಲಿನ ನೆನಪಿನ ರಾಶಿ ಮನದಣಿಸುತ್ತಲೇ ಇದೆ. 

ಶುಕ್ರವಾರ, ಡಿಸೆಂಬರ್ 5, 2014

ಅನಿವಾರ್ಯತೆ ಆಳುವಾಗ..ಬದುಕು ತೃಣಮಾತ್ರ...!!!

ಮನದ ಮೂಲೆಯಲ್ಲಿ ಮುನಿಸಿಕೊಂಡು ಮುದುಡಿರುವ ಭಗ್ನ ಕನಸುಗಳು ಆಗಾಗ ಜೀವ ತಾಳುತ್ತಿವೆ. ಅರೆಕ್ಷಣ ನೆನಪಾಗಿ ಮರುಕ್ಷಣ ಮರೆತಂತಾಗುವ ಕನಸುಗಳು ನೆನಪಾಗದೇ ಇರೋದೂ ಇಲ್ಲ. ಅಂತಹ ಕನಸುಗಳು ಮತ್ಯಾವಗಲೋ ನೆನಪಾದಾಗ ಮನಸ್ಸಿಗೆ ಸಣ್ಣ ಘಾತ, ಆತಂಕ. ಎಲ್ಲೋ ಹೋಗಿ ಎಲ್ಲೋ ಸೇರಬೇಕಿದ್ದ ಬದುಕಿನ ಹಾದಿ ಬದಲಾಗಿದೆ. ಬದಲಾವಣೆಯ ಸುಳಿವನ್ನೂ ನೀಡದೇ, ಬದುಕು ತನ್ನಿಷ್ಟದ ಮಂಕುಲಲ್ಲಿ ತಿರುವುತ್ತಾ, ಕಷ್ಟದ ಗುಡ್ಡಗಳನ್ನೂ ಅನಾಯಾಸಾವಾಗಿ ಹತ್ತಿಸುತ್ತಾ, ಪ್ರಪಾತಗಳಂಚಿನಲ್ಲೂ ಕೈಹಿಡಿದು ಸಾಗಿಸುತ್ತಿದೆ. ಬಯಲ ಬರಡು ಭೂಮಿಯಿಂದ ಪಯಣ ಹೊರಟರೂ ಅಚ್ಚ ಹಸುರಿನಿಂದ ಕಂಗೊಳಿಸುವ ನಾಡಿನವರೆಗೂ ಸಾಗಿಬಂದಿದೆ. ಅಷ್ಟೇ ಹಸಿರಾಗಿರುವ ನೆನಪುಗಳ ಮೂಟೆ ಹೊತ್ತು... ಇನ್ನು ಸಾಕೆನಿಸಿದರೂ ಬೇಕೆನಿಸುವ ಮನದಂಬಲಕ್ಕೆ ಕೊನೆಯಿಲ್ಲ. ಹೊಸ ಕನಸುಗಳ ಹುಡುಕಾಟ, ಕಮರಿಹೋಗಿರುವ ಹಳೆ ಕನಸುಗಳ ಗೋಳಾಟ, ಮಧ್ಯದಲ್ಲಿ ನಿಂತು ದಿಕ್ಕು ತೋಚದಂತಾಗಿರುವ ಹೊತ್ತಲ್ಲೇ ಬದುಕು ಮತ್ತೊಂದು ಮಗ್ಗುಲಿಗೆ ವಾಲುತ್ತಿದೆ. ಬಂಧನದ ಬೇಡಿ ಬೆಸೆಯುವ ಅವಸರ ಮನಸ್ಸಿಗೆ ಇನ್ನಿಲ್ಲದ ಕಿರಿಕಿರಿ ಅನ್ನಿಸುತ್ತಿದೆ. ಬದುಕನ್ನ ಅನಿವಾರ್ಯತೆಯ ಕೈಗಿಟ್ಟು ಸಾಗಲೇಬೇಕಾದ, ನಿರ್ಧರಿಸಲೇಬೇಕಾದ ಅಸಹಾಯಕತೆ ಮನಸ್ಸನ್ನ ಹಿಂಸಿಸುತ್ತಿದೆ. ಜೀವನದಲ್ಲೊಮ್ಮೆ ಬರುವ, ಖುಷಿ ತರುವ ಈ ಶುಭಘಳಿಗೆಯನ್ನ ಇಷ್ಟೊಂದು ಒಲ್ಲದ ಮನಸ್ಸಿನಿಂದ ಸ್ವಾಗತಿಸಬೇಕಾಗುತ್ತದೆ ಎನ್ನುವ ಕಲ್ಪನೆ ಕಿಂಚಿತ್ತೂ ಇರಲಿಲ್ಲ. ಬಹುಷ ನಾನಂದುಕೊಂಡಿದ್ದು ನಿಜವಾಗಿದ್ದರೆ ಹೀಗಾಗುತ್ತಿರಲಿಲ್ಲ. ನನ್ನೀ ನೋವಿಗೆ ನಾನೆ ಹೊಣೆಗಾರ, ಬೇರೆಯವರನ್ನ ದೂಷಿಸುವುದೂ ನನಗತ್ಯವಿಲ್ಲ. ಅನ್ಯರ ಅನುಕಂಪವೀಗ ವಾಕರಿಕೆ..!
ನಾವು ಅಂದುಕೊಂಡ ಹಾದಿಯಲ್ಲಿ ಸಾಗಲು ಆಗಿಲ್ಲ ಅಂದ್ರೆ ಬದುಕು ಕರೆದೊಯ್ಯುವ ಹಾದಿಯಲ್ಲೇ ಸಾಗಬೇಕೆಂಬ ಸಾಲುಗಳಿಲ್ಲ ಹೆಚ್ಚು ಅರ್ಥ ನೀಡುವುದು ಇದೇ ಕಾರಣಕ್ಕೆ. ನೀ ಕರೆದಂತೆ, ನೀ ಹೋದಂತೆ, ನೀ ಬರೆದಂತೆ, ನಿನ್ನಿಚ್ಚೆಯಂತೆ ಸಾಗುತ್ತಿದ್ದೇನೆ ಎನ್ನುವ ಅಸಹಾಯಕ ಕೊರಗಿನೊಂದಿಗೆ....ಸಾಗಲಿ ಈ ಪಯಣ ಗುರಿ ಮರೆತು ಹೋಗಿರುವ ಅಲೆಮಾರಿಯಂತೆ...!!!

ಬುಧವಾರ, ಆಗಸ್ಟ್ 7, 2013

ಮರೆಯಲೆಂತೋ ಮಲ್ಲಿಗೆಯ ಘಮ...!!!

                                       ಮನಸ್ಸಿನ ಮನಸ್ಸಿಗೆ ಮಂಕು ಕವಿದು ಮುಸ್ಸಂಜೆಯಲ್ಲಿ ಮೂಕವಾಗಿ ಮುಳುಗಿದ ಸೂರ್ಯನ ಉದಯಕ್ಕೆ ಕಾದು ಕುಳಿತಂತಿದೆ. ಭೂಮಿಯ ಋಣ ತೀರಿಸದಿದ್ದರೂ ಮರಳಿ ಮಣ್ಣಿಗೆ ಸೇರುತ್ತಿರುವ ದೇಹದ ಮೇಲಿರುವ ಮಲ್ಲಿಗೆ ಘಮಘಮಿಸುತ್ತಲೇ ಇದೆ.  ಸೇರುವುದು ಮಸಣವಾದ್ರೂ ಮೊಗದಲ್ಲಿ ಮುಗಳ್ನಗೆ ಕುಂದದೇ ಧೀರ್ಘಪಯಣದ ದಿಕ್ಕಿನಲ್ಲಿ ಮೂಕವಿಸ್ಮಿತ. ನಗುಮೊಗದ ಯೌವ್ವನದ ಚೆಲುವೆಯ ಮುಡಿಯೇರಿ ಅವಳ ಸೌಂದರ್ಯ ಹೆಚ್ಚಿಸಿದ್ದ ಹಿರಿಮೆಯನ್ನ ಮಲ್ಲಿಗೆ ಮೌನವಾಗಿ ಮರೆತಂತಿದೆ. ಮುಡಿದು ಮೆರೆದವಳೂ ಮನಸ್ಸು ಮುರಿದುಕೊಂಡು ಮರಳಿ ಬರುವುದಿರಲಿ ಮಲ್ಲಿಗೆ ಸುವಾಸನೆಗೂ ಅವಳು ದ್ವೇಷಿ. ಅದೇಕೋ ಸಂಬಂಧಗಳು ಸಿಹಿ ಅನ್ನಿಸುವಾಗ ಕಹಿಯೂ ಸಿಹಿ, ಆದ್ರೆ ಒಮ್ಮೆ ಕಹಿಯಾದ್ರೆ ಎಂತಹ ಸಿಹಿಯೂ ಸಿಹಿಯಾಗಲಾರದು ಅನ್ನಿಸುತ್ತೆ. ಅಂತಹದ್ದೇನಾಯ್ತು ಅಂತ ಪ್ರಶ್ನಿಸಿಕೊಂಡರೆ ಸಿಕ್ಕುವುದು-ಧಕ್ಕುವುದು ಹೇಳಿಕೊಳ್ಳುವ ಕಾರಣಗಳಲ್ಲ. ಅಂತಹ ಕಾರಣ ಸಿಕ್ಕಿದ್ರೆ ಕಾರಣ ಹೇಳಿಯೇ ಹೊರಡಬಹುದಿತ್ತೇನೋ?... ಹೊರಟಾಗಿದೆ..
                                      ಮತ್ತೆ ಬಾರನೆಂಬುದು ಸತ್ಯವೆನಿಸಿದ್ರೂ ಸತ್ಯದ ಭರವಸೆ ಸಾಕಷ್ಟು ಬಾರಿ ಕಳಚಿ ಸತ್ಯ ಬೆತ್ತಲಾಗಿದೆ ಆದ್ರೀಗ ಮತ್ತೆ ಕತ್ತಲಾಗಿದೆ. ಕತ್ತಲು-ಬೆತ್ತಲೆಗಳ ಮಧ್ಯೆ ಮಲ್ಲಿಗೆ ಘಮಘಮಿಸಿ-ಸುಖಿಸಿದ ಮನಸ್ಸಿಗಿಂದು ಮಾರ್ಗ ಕಾಣದ ಕುರುಡುಗತ್ತಲೆ ಆವರಿಸಿದೆ. ಇದು ಕಾರ್ಗತ್ತಲೆಯೇ? ಆಗಿದ್ದೇ ಆದ್ರೆ ಅದ ಬೆಳಗಲು ದೀಪ ಹೊತ್ತಿಸಬೇಕಿದೆ. ಮನಸ್ಸೆಂಬ ದೀಪಕ್ಕೆ ನೆನೆಪೆಂಬ ಬತ್ತಿಯಿದ್ದರೂ ಕತ್ತಲೆ ಕಳೆಯುವ ಕಿಡಿ ಮಾತ್ರ ಹೊತ್ತುತ್ತಲೇ ಇಲ್ಲ. ಹೊತ್ತು-ಗೊತ್ತಿಲ್ಲದೇ ಹೊತ್ತಿ ಉರಿಯುತ್ತಿದ್ದ ದೀಪವೀಗ ಸ್ಥಬ್ಧವಾದ ಭಾಸ... ನೆನೆಪೆಂಬ ಬತ್ತಿ ಪ್ರೀತಿಯ ಎಣ್ಣೆಯಲ್ಲಿ ಅದೆಷ್ಟು ಮಿಂದೆದ್ದು, ಹೊಯ್ದಾಡಿ, ಹೊರಳಾಡಿದ್ರೂ ಬೆಳಕ ಬೆಳಗದೇ ಮೋಕ್ಷವಿಲ್ಲ. ಮೋಹಕ್ಕೆ ಸಿಲುಕದೇ ಹೋಗಿದ್ದರೆ ಹೊತ್ತಿದ್ದ ಪ್ರೀತಿಯ ಕಿಡಿ  ಬೆಳಗುತಿತ್ತೇ ಅನ್ನೋ ಜಿಜ್ಞಾಸೆ ಮನಸ್ಸನ್ನ ಹಿಂಸಿಸುತ್ತಿದೆ. ಮೋಹವೇ ಇರುವ ಪ್ರೀತಿಗೆ ಕೊಳ್ಳಿಯಿಟ್ಟು ರಕ್ಕಸಾನಂದ ಪಡುತ್ತಿದೆಯಾ?. ಘಮಘಮಿಸಿದ ಮಲ್ಲಿಗೆಗೂ-ಬೆಳಗಿದ ದೀಪಕ್ಕೂ ಮೋಹದ ಮೋಸದ ಬಲೆಗೆ ಸಿಲುಕಿ ನಲುಗಿದ ಪ್ರಾಯಶ್ಚಿತವೂ ಇಲ್ಲ. ಮುಳುಗಿದ ಸೂರ್ಯ ಮರಳಿ ಉದಯಿಸುವನೆಂಬ ಭರವಸೆಯಲ್ಲೇ ಬದುಕು....!!!

ಶುಕ್ರವಾರ, ನವೆಂಬರ್ 16, 2012

ಬಾಲ್ಯ ಮತ್ತೆ ನೆನಪಾಗಿದೆ....

                            ಆ ದಿನಗಳಂತೂ ಮತ್ತೊಮ್ಮೆ ಬರೋದಿಲ್ಲ. ಆದ್ರೆ ಆಗ ಕಳೆದ ಪ್ರತಿಯೊಂದನ್ನೂ ಮರೆಯೋಕೆ ಸಾಧ್ಯವೇ ಇಲ್ಲ. ಬಾಲ್ಯದ ಸಿಹಿ-ಕಹಿ, ಮುಜುಗರದ, ಹೇಳಲಾಗದ, ಹೇಳಿದರೂ ಕೇಳಲಾಗದ ಅದೆಷ್ಟೋ ಸಂಗತಿಗಳು... ಇದೆಲ್ಲವೂ ಇಂದು ಮತ್ತೆ ನೆನಪಾಗಿದೆ. ನೆನಪುಗಳನ್ನೇ ಮತ್ತೆ ಮತ್ತೆ ನೆನೆಯುತ್ತಾ, ಕಣ್ಣಂಚಲಿ ದೃಶ್ಯಗಳು ಹೊಯ್ದಾಡಿ ಒದ್ದೆಯಾದ ಅನುಭವ. ಮುದ್ದು ನೆನಪುಗಳ ಸದ್ದಿಲ್ಲದೇ ಸವಿಯುತ್ತಿದ್ದ ನನಗಿಂದು ಅವುಗಳನ್ನ ಹಂಚಿಕೊಳ್ಳುವ ತವಕ....
                  
                              ನನಗೆ ತೀರ ಹತ್ತಿರವಾದ ವ್ಯಕ್ತಿಯೊಂದಿಗೆ ಅಪರೂಪಕ್ಕೆ ಮಾತಾಡುತ್ತಿದ್ದೆ. ದಿನದಲ್ಲಿ ಎರಡು ಬಾರಿ ಮಾತನಾಡಿದ್ದು ಬಹುಷ ಇದೇ ಮೊದಲು. ಹರಟುತ್ತಾ, ಕಾಲೆಳೆಯುತ್ತಾ, ಕೀಟಲೇ, ಜಗಳ ಬಳಿಕ ಕ್ಷಮೆ ಹೀಗೆ ಸಾಗುತ್ತಲೇ ಇತ್ತು. ವರ್ತಮಾನದಲ್ಲಿದ್ದ ಅವಳ ಮನಸ್ಸು ಯಾಕೋ ಭೂತದ ನೆನಪುಗಳನ್ನ ಮೆಲುಕುಹಾಕೋಕೆ ಮುಂದಾಯ್ತು. ಹಠಮಾರಿ, ಯಾರೇ ಹೇಳಿದ್ರೂ, ಕರೆದ್ರೂ ಬಾರದ ಪುಟ್ಟ ಬಾಲೆ, ಸುಮಾರು ಮೂರರ ಪ್ರಾಯದ ಚೋಟು ಅಷ್ಟೇ. ಯಾರಿಗೂ ಜಗ್ಗದ ಈ ಚೋಟು ಪಕ್ಕದ ಮನೆಯ ಮತ್ತೊಂದು ಹುಡುಗನೆಂದ್ರೆ ಪಂಚಪ್ರಾಣವಂತೆ. ಅವನು ಸ್ಕೂಲ್ ಬ್ಯಾಗ್ ಹಾಕಿಕೊಂಡು ಬಂದ್ರೆ ಸಾಕು, ಇವಳೂ ಅವನೊಂದಿಗೆ ಸ್ಕೂಲಿಗೆ ಸನ್ನದ್ಧಳಾಗುತ್ತಿದ್ದಳಂತೆ. ಬಾಲಮುರುಳಿ ಅದ್ಯಾವ 'ಮೋಹ'ನ ಮೋಡಿ ಮಾಡಿದ್ದನೋ, ಚೋಟು ಹಠವಾದಿಯಾದ್ರೂ ಅವನೊಮ್ಮೆ ಇವಳತ್ತ ಸುಳಿದ್ರೆ ಸಾಕು, ಇವಳು ಮೌನಿಯಾಗುತ್ತಿದ್ದಳಂತೆ.....!!! ವಿಸ್ಮಯವಲ್ಲದೇ ಮತ್ತಿನ್ನೇನು..? ಈಗೇನಾದ್ರೂ ಅವನು ನನಗೆ ಸಿಕ್ರೆ, ಅದೇನ್ ಮೋಡಿ ಮಾಡಿದ್ದ ಅಂತ ಕೇಳದೇ ಬಿಡೋದಿಲ್ಲ.

                        ಇಷ್ಟು ಸಾಕಿತ್ತು ನನ್ನೆದೆ ನನ್ನ ಚೋಟು ಡೇಯ್ಸ್ ಗೆ ಹೋಗೋಕೆ... ಆಗ ನನಗಿನ್ನೂ ಕೇವಲ ಮೂರು ವರ್ಷವಂತೆ. ಅಸಂಖ್ಯಾತ ಭಕ್ತರನ್ನ ಹೊಂದಿದ್ದ, ನಮ್ಮ ಭಾಗದ ದೊಡ್ಡ ಜಾತ್ರೆ ತಿಂಥಿಣಿ ಮೌನೇಶ್ವರನ ಜಾತ್ರೆ ಆರಂಭವಾಗಿತ್ತಂತೆ. ನಮ್ಮ ಬಂಧು-ಬಳಗ ನೆಂಟರಿಷ್ಟರೊಡನೆ ಅಪ್ಪ ಅಮ್ಮ ನನ್ನನ್ನೂ ಕರೆದುಕೊಂಡು ಹೋಗಿದ್ರಂತೆ. ದೇವಸ್ಥಾನಕ್ಕಿಂತ ಸ್ವಲ್ಪ ದೂರದಲ್ಲಿ ಬಿಡಾರ ಹೂಡಿದ್ದಾರೆ. ಜನಜಂಗುಳಿಯಿಂದ ತುಂಬಿ ತುಳುಕಿದ್ದ ಕಾರಣಕ್ಕಾಗಿ, ನನ್ನನ್ನ ನನ್ನ ಸೋದರತ್ತೆ-ಮಾವನವರ ಸುಪರ್ದಿಗೆ ಒಪ್ಪಿಸಿದ ಅಪ್ಪ-ಅಮ್ಮ, ದರ್ಶನಕ್ಕೆಂದು ದೇವಸ್ಥಾನಕ್ಕೆ ಹೋಗಿದ್ದಾರೆ. ಬರುವವರೆಗೂ ಇವನು ನಿಮ್ಮೊಡನೆ ಇರಲಿ ಜೋಪಾನ ಎಂದು ಹೇಳಿ ಹೊರಟು ಹೋಗಿದ್ದಾರೆ. ಅದಾಗ ತಾನೆ ಮದ್ವೆಯಾಗಿದ್ದ ಅವರಿಗೆ ಜಗದ ಪರಿವೇ ಇಲ್ಲದಂತೆ, ಮಾತಿನ ಲೋಕದಲ್ಲಿ ಮುಳುಗಿದ್ದಾರೆ. ಜನಜಂಗುಳಿಯೇ ಲೆಕ್ಕಕ್ಕೇ ಇಲ್ಲ ಎಂದಾದಮೇಲೆ ಇನ್ನು ನಾನಾವ ಲೆಕ್ಕ. ನನ್ನನ್ನೂ ಮರೆತುಬಿಟ್ಟಿದ್ದಾರೆ... ಮೂರರ ಪ್ರಾಯದ ನಾನು ನಿಧಾನವೇ ಅಲ್ಲಿಂದ ಕಾಲ್ಕಿದ್ದೇನೆ. ಸುಮಾರು ದೂರ, ಜನಜಾತ್ರೆಯ ನಡುವೆ ಹೊರಟು ಹೋಗಿದ್ದೆ. ದರ್ಶನದ ಬಳಿಕ ಅಪ್ಪ-ಅಮ್ಮ ನಾನಿಲ್ಲದ್ದನ್ನ ನೋಡಿ ದಿಗಿಲುಗೊಂಡಿದ್ದಾರೆ. ನನ್ನ ಮಗ ಕಳೆದೇ ಬಿಟ್ಟ ಅಂತ ಗೋಳಾಡಿದ್ದಾರೆ. ಈ ಮಧ್ಯೆ ನನ್ನ ಜವಾಬ್ದಾರಿ ಹೊತ್ತಿದ್ದ ಅತ್ತೆ ಮಾವನಿಗೂ ತಕ್ಕ ಮಂಗಳಾರತಿಯೂ ನಡೆದಿದೆ. ಜಾತ್ರೆಯಲ್ಲಿ ಮಕ್ಕಳ ಕಳ್ಳರಿದ್ದಾರೆ ಎಚ್ಚರಿಕೆ ಎಂದು ದೇವಸ್ಥಾನದ ಮೈಕ್ ನಿಂದ ಅನೌನ್ಸಮೆಂಟ್ ಕೇಳಿ ಅಮ್ಮ ಮತ್ತಷ್ಟು ಚಿಂತೆಗೀಡಾಗಿದ್ದಳು. ಕಿವಿಯಲ್ಲಿರುವ ಬಂಗಾರದ ರಿಂಗ್ ಕದಿಯೋಕೆ ನನ್ನ ಮಗನನ್ನ ಯಾರೋ ಕದ್ದೊಯ್ದಿದ್ದಾರೆ ಎಂಬ ಅನುಮಾನ ಮೂಡದೇ ಇರಲಿಲ್ಲ.


                           ದಿಗ್ಭ್ರಾಂತರಾಗಿ ಹುಡುಕಿ, ಬೇಸತ್ತಾಗಲೇ ಮತ್ತೊಂದು ಅನೌನ್ಸ್ ಮೆಂಟ್ ಕಿವಿಗೆ ಬಿದ್ದಿದೆ. "ಯರಮಸಾಳ ಗ್ರಾಮದ ಚಿಕ್ಕ ಹುಡುಗ ಸಿಕ್ಕಿದ್ದಾನೆ. ಸಂಬಂಧಪಟ್ಟವರು ಬಂದು ಕರೆದುಕೊಂಡು ಹೋಗಿ" ಎಂದು. ಇದು ಕೇಳಿದ್ದೇ ತಡ ಎದ್ನೋ ಬಿದ್ನೋ ಅಂತ ಓಡಿ ಬಂದಿದ್ದಾರೆ. ಗಾಬರಿಯಾಗಿದ್ದ ಅವರಿಗೆ ನನ್ನನ್ನ ನೋಡಿ ಜೀವ ಬಂದಂತಾಗಿತ್ತು. ಆದ್ರೆ ಕಳೆದುಹೋಗಿದ್ದ ಆಸಾಮಿ ನಾನು ಮಾತ್ರ ಯಾರೋ ಕೊಡಿಸಿದ್ದ ಬೆಂಡು, ಬತಾಸು ಮುಕ್ಕುವುದರಲ್ಲೇ ಬಿಜಿಯಾಗಿದ್ದನಂತೆ.....!!!

                  

ಗುರುವಾರ, ಸೆಪ್ಟೆಂಬರ್ 27, 2012

ಬಾನೆಲ್ಲೋ............ಭುವಿಯಲ್ಲೋ...............




ಅದ್ಯಾಕೋ ಮತ್ತೆ ಅನಾಥ ಭಾವ ಕಾಡುತ್ತಿದೆ. ಮಾನಸ ಮಿಲನವಿಲ್ಲದೇ ಏಕಾಂತ ನನ್ನನ್ನ ಮತ್ತೆ ಮತ್ತೆ ಅಣುಕಿಸುತ್ತಿದೆ. ದಿಕ್ಕುದೆಸೆಯಿಲ್ಲದ ಪಯಣಕ್ಕೆ ಗುರಿಯೇ ಅಸ್ಪಷ್ಟವಾಗುತ್ತಿದೆ. ಮಂಜು ಮುಸುಕಿದ ಮೋಡದಂತೆ ತಣ್ಣಗಾಯಿತು ಎನ್ನುವಷ್ಟರಲ್ಲಿ, ಬೂದಿ ಮುಚ್ಚಿದ ಕೆಂಡದಂತೆ ಆಸ್ಫೋಟಗೊಳ್ಳುತ್ತಲೇ ನನ್ನನ್ನ ಕಾಡುವುದೇ ಅದಕ್ಕೆ ರಕ್ಕಸಾನಂದವಾಗಿಸಿಬಿಟ್ಟಿದೆ. ಅರಿವಿಲ್ಲದೇ ನನ್ನನ್ನ ಖಿನ್ನತೆಗೆ ದೂಡುತ್ತಿರುವುದಲ್ಲದೇ, ಮನಸ್ಸನ್ನ ನಿಮಿಷದಲ್ಲೇ ಮಸಣವಾಗಿಸಿಬಿಡುವ ರಣಭಾವದ ರೌದ್ರ ನರ್ತನ ಎದೆಯಲ್ಲಿ. ದೂರವಾದವರ ನೆನಪು ದುರಂತಕ್ಕೆ ಸಾಕ್ಷಿಯೆಂಬಂತೆ ಮನಕ್ಕಪ್ಪಳಿಸಿ, ನನ್ನನ್ನ ಮೂದಲಿಸಿ ಸಾಯಿಸಿ ನೋಯಿಸುವ ವಿರಹಿ ನೋವಿಗೆ ಕೊನೆ ಹಾಡಲೆಂತೋ ಕಾಣೆ...
          ನಾನೇನೋ ಕಳೆದುಕೊಂಡೆನಾ ಅಂತ ಪ್ರಶ್ನಿಸಿಕೊಂಡರೆ, ಕಳೆದುಕೊಳ್ಳುವಂತಹದ್ದನ್ನ ನಾನು ಪಡೆಯಲೇ ಇಲ್ಲ. ಭಾವನೆಗಳ ಹುಚ್ಚು ಆವೇಶ ಅಂಥದ್ದೊಂದು ಭ್ರಮಾಲೋಕ ಸೃಷ್ಟಿಗೆ ಕಾರಣವಾಯ್ತಾ? ಅದನ್ನ ಭ್ರಮೆ ಅಂತ ಕರೆಯುವುದಾದರೂ ಹೇಗೆ. ಒಮ್ಮೆ ಅದು ಭ್ರಮೆ ಅನ್ನಿಸಿದ ಮೇಲೆ ಅದೇ ಭ್ರಮೆ ಮತ್ತೆ ಮೂಡಲಾರದು. ಹೀಗಾಗಿಯೇ ಅದು ಭ್ರಮೆಯಂತೂ ಅಲ್ಲ ಎಂದೆನ್ನಿಸಿದ್ರೂ ಭ್ರಮೆ ಎಂದೇ ಭಾವಿಸಿ, ಅನವಶ್ಯಕ ಭಾವನೆಗಳನ್ನ ಬಲಿಕೊಡುವುದೇ ಒಳಿತು ಎನ್ನಿಸಿದೆ. ಗತಿಸಿಹೋದುದ್ದಕ್ಕೆ ಚಿಂತಿಸಿ ಫಲವಿಲ್ಲ ನಿಜ, ಗತಿಸೋಕು ಮುನ್ನವೂ ಫಲಾಪೇಕ್ಷೆ ಇರಲೇ ಇಲ್ಲ ಅನ್ನೋದು ಅಷ್ಟೇ ಸತ್ಯ.
          ಮನದ ಹೊಸಿಲು ದಾಟಿ, ಮತ್ತೊಂದು ಕನಸಿನ ಹೊಸಿಲನ್ನ ಮೆಟ್ಟಿಯಾಗಿದೆ. ಮರೆತವಳ ಮನಸ್ಸೆಂದು ಮಂದಾರವಾಗಲಾರದು. ಮತ್ಯಾಕೆ ಮನದ ಬನದಲ್ಲಿ ನಿತ್ಯವೂ ಭಾವ ಪಸರಿಸೋದು? ಎಂಥ ಮಳೆ ಸುರಿದರೂ ಭಾವಬೀಜ ಮೊಳಕೆ ಒಡೆಯೋದಿಲ್ಲ. ನಂದನವನ ಆಗೋದಿಲ್ಲ, ಇನ್ನೇನಿದ್ದರೂ ಅರಣ್ಯರೋದನವಷ್ಟೇ............... ಮತ್ತೆ ಭಾವಾತಿರೇಕದಿಂದ ಬೆಂದ ಬೆಂಗಾಡಾಗಿದೆ ನನ್ನೆದೆ. ಭುವಿಯ ಏಕಾಂತತೆ,,,, ಮುಗಿಲಿನ ಅನಂತತೆ,,, ಒಬ್ಬರನ್ನೊಬ್ಬರು ನೋಡಿ ಸಮಾಧಾನವಾದಂತೆ. ಭುವಿಯ ಹಸಿರ ಸಿರಿಗೆ ಕಾದಿರುವುದು ಮನ.  

ಗುರುವಾರ, ಜುಲೈ 12, 2012

'ಅಮೃತ'ಘಳಿಗೆ.......

‘ಸಮಯ’ ಕೊಟ್ಟಿರುವ ಅಪಾರ ಕೊಡುಗೆಗಳಲ್ಲಿ ಅಮೃತಾ ಕೂಡ ಒಬ್ಬಳು. ಯಾವುದೋ ಮಳೆನಾಡಿನ ಮತ್ತೀಹಳ್ಳಿಯಿಂದ ಬಂದ ಮುಗ್ಧೆ. ಬಂದ ಹೊಸತರಲ್ಲಿ ಅವಳ ಹಾಡಿನಿಂದಲೇ ಎಲ್ಲರಿಗೂ ಇಷ್ಟವಾಗಿದ್ದಳು. ಈಗಲೂ ಅವಳನ್ನ ಅವಳೇ ಹಾಡುತ್ತಿದ್ದ, ನಮ್ಮೆಲ್ಲರ ಮನಸನ್ನ ಗೆದ್ದಿದ್ದ ‘ಮುದುಕಿಯಾದರೇನಾಯ್ತಾ....’ ಹಾಡಿನಿಂದಲೇ ಗುರುತಿಸೋದು. ಗೋಕಾಕ್‌ನಿಂದ ಬೆಂಗಳೂರಿಗೆ ಬಂದ ಹೊಸತರಲ್ಲಿ ಎಲ್ಲರನ್ನೂ ಬೇರೆ ಬೇರೆ ವಿಭಾಗಗಳಿಗೆ ನಿಯೋಜನೆ ಮಾಡಿಬಿಟ್ಟರು. ಅಮೃತಾ ಮತ್ತು ನನ್ನನ್ನು ಇನ್‌ಪುಟ್‌ನ ಕೆಲಸಕ್ಕೆ ಹಾಕಿದ್ರು. ಅದರ ಅರ್ಥ ಗೊತ್ತಿಲ್ಲದ ನಮಗೆ, ನಮ್ಮ ಇನ್‌ಪುಟ್‌ ಸೀಟು ಹಾಗೂ ಕಂಪ್ಯೂಟರ್ ತೋರಿಸಿ ಇಲ್ಲೇ ಕೆಲಸ ಮಾಡಬೇಕೆಂದಾಗ ನಾವಿಬ್ಬರೂ ತಬ್ಬಿಬ್ಬಾಗಿದ್ದೆವು. ‘ದಶರಥರೇ ಕೆಲಸ ಎಂಥ ಅಂತ ಗೊತ್ತಾ’ ಅಂದ್ಲು. ಮುಂಚೆ ಬಹುವಚನದಲ್ಲಿ ಅಮೃತಾ ನನ್ನನ್ನ ಹಾಗೆಯೇ ಕರೆಯುತ್ತಿದ್ದಳು. ನನಗೂ ಕೆಲಸ ಏನೂ ಅಂತ ಗೊತ್ತಿಲ್ಲ ಅಂದೆ. ಇಬ್ಬರೂ ಮುಖ ಮುಖ ನೋಡಿಕೊಂಡೆ ಮೊದಲರ್ಧ ದಿನ ಕಳೆದೆವು.


 ನಮಗಿಂತ ಮೊದಲು ಇನ್‌ಪುಟ್‌ ಕೆಲಸ ಮಾಡುತ್ತಿದ್ದ ಸೀಮಾ, ಅರ್ಪಣಾ ಹೀಗೀಗೆ ಕೆಲಸ ಮಾಡಬೇಕೆಂದು ತೋರಿಸಿದರು. ಅದೆನೋ ಕಷ್ಟದ ಕೆಲಸ ಅಂತಲೇ ತಿಳಿದಿದ್ದ ನಮಗೆ ನಮ್ಮ ಕೆಲಸ ಇಷ್ಟೆನಾ ಎಂದು ಖುಷಿಪಟ್ಟಿದ್ದೆವು. ಜಿಲ್ಲೆಯಿಂದ ಬಂದ ಸುದ್ದಿಯ ಒಂದು ಪ್ರಿಂಟ್‌ನ್ನ ಬುಲೆಟಿನ್ ಪ್ರೊಡ್ಯೂಸರ್‌ಗೆ ಕೊಟ್ರೆ ನಮ್ ಕೆಲಸ ಮುಗೀತು ಅಂತಷ್ಟೇ ಅಂದುಕೊಂಡು, ಬಂದ ಸುದ್ದಿಯನ್ನೆಲ್ಲಾ ಹಾಗೆ ಪ್ರಿಂಟ್ ಹಾಕಿದ್ದೇ ಹಾಕಿದ್ದು, ಕೊಟ್ಟಿದ್ದೇ ಕೊಟ್ಟಿದ್ದು. ಒಂದರ್ಥದಲ್ಲಿ ನಾವಿಬ್ಬರೂ ಆಗ ಕೀ ಕೊಟ್ಟ ಗೊಂಬೆಗಳಂತೆ. ದಿನ ಕಳೆದಂತೆ ಜವಾಬ್ದಾರಿಗಳೂ ಜಾಸ್ತಿ ಆಗುತ್ತಾ ಹೋದವು. ನಮ್ಮ ನಡುವಿನ ಸ್ನೇಹವೂ ಬೆಳೆದು ಹೆಮ್ಮರವಾಗಿತ್ತು. ದಶರಥರೇ ಅನ್ನುತ್ತಿದ್ದವಳು ದಶಾ...... ಎಂದು, ಅಮೃತಾ ಎನ್ನುತ್ತಿದ್ದವನು ಅಮ್ಮು ಅಂತ ಕರೆಯುವವರೆಗೆ...


 ಡೆಸ್ಕ್ ಸುದ್ದಿಮನೆ ಅಂದ್ರೆ ಕೇಳ್ಬೇಕಾ, ಬಂದ ಸುದ್ದಿ ಹಾಗೆ ಬಿಸಿ ದೋಸೆಯಂತೆ ಕೊಡುತ್ತಲೇ ಇರಬೇಕು. ಎಂತಹ ಸಂಧರ್ಭದಲ್ಲೂ ಧೃತಿಗೆಡದೇ ಸಮರ್ಥವಾಗಿ ಕೆಲಸ ಮಾಡುತ್ತಿದ್ದೆವು. ಹೀಗಾಗಿಯೇ ಡೆಸ್ಕ್ ನಲ್ಲಿ ಎಲ್ಲರೂ ನಮ್ಮನ್ನ ಪ್ರೀತಿಯಿಂದ ಕಾಣುವಂತಾಗಿತ್ತು. ಕೆಲಸದ ಮಧ್ಯದಲ್ಲಿ ಹೀಗೆ ಒಂದಷ್ಟು ಹರಟುತಿದ್ದೆವು. ಅವಳ ಬಾಲ್ಯ, ಓದಿದ ಶಾಲೆ, ಅಪ್ಪ, ಅಮ್ಮ, ತಂಗಿಯ ಬಗ್ಗೆ, ಮಾಡಿದ ತುಂಟಾಟಗಳು, ಮಾಡಿದ ಜಗಳಗಳು, ದುಃಖದ ಕ್ಷಣಗಳು, ಸಂತಸದ ಕ್ಷಣಗಳು, ಹೀಗೆ ಎಲ್ಲವನ್ನೂ ಹೇಳಿಕೊಳ್ಳುತ್ತಿದ್ದಳು. ಚೆನ್ನಾಗಿ ಕೆಲಸ ಮಾಡಿದಾಗ ನೀನು ಜಾಣ, ನನಗೂ ಹೇಳಿಕೊಡು ಅಂದಾಗ ನಾನು ಹಿರಿ ಹಿರಿ ಹಿಗ್ಗುತ್ತಿದ್ದೆ. ಎಡವಟ್ಟು ಮಾಡಿದಾಗ ಮುಖ ಮುಲಾಜಿಲ್ಲದೇ ಝಾಡಿಸಿದಾಗ, ಸಪ್ಪೆ ಮುಖ ಹಾಕಿಕೊಂಡು ಕೂತಿದ್ದುಂಟು. ಹ್ಹಾ.... ಹೇಳೋದು ಮರೆತೆ ಅವಳಿಗೆ ಧಾರವಾಹಿ ನಟಿಯಾಗಬೇಕೆಂಬ ಹೆಬ್ಬಯಕೆ. ತಾನು ನಟಿಯಾಗಬೇಕೆಂದು, ಅದಕ್ಕೆ ಕಲಿತಿರುವ ಭರತನಾಟ್ಯ, ಸಂಗೀತದ ಪ್ರಯೋಗಗಳು ಆಗಾಗ ನಡೆಯುತ್ತಲೇ ಇದ್ದವು. ಕೆಲಸ ಬೇಜಾರಾದಾಗ “ದಶಾ ನನಗೆ ಈ ಕೆಲಸ ಬ್ಯಾಡಾಗಿತ್ತು. ಬೇಗ ಮದ್ವೆ ಆಗಿ ನೈಟಿ ಹಾಕ್ಕೊಂಡು ಟಿವಿ ನೋಡ್ತಾ ಕೂರೋ ಆಂಟಿಯಾಗ್ಬೇಕು, ಸಾಕು ಈ ಕೆಲಸದ ಸಹವಾಸ” ಅಂತಲೂ ಗೊಣಗಿದ್ದುಂಟು.


 ಎಲ್ಲೋ ಹುಟ್ಟಿ ಎಲ್ಲೋ ಬೆಳೆದ ನಮ್ಮಿಬ್ಬರನ್ನೂ ಸ್ನೇಹ ಬಂಧನ ಗಟ್ಟಿಯಾಗಿ ಬಂಧಿಸಿದೆ. ಆತ್ಮೀಯ ಗೆಳೆಯರಲ್ಲಿ ಅಮೃತಾಳು ಪ್ರಮುಖಳು. ಅದೇನೇ ಸಂತೋಷ, ಅದೇನೇ ಹೊಸ ವಿಷಯ ಇದ್ದರೂ ಅವಳಿಗೆ ಹೇಳದೇ ಇರಲಾರೆ. ಅವಳೂ ಅಷ್ಟೇ. ನಾನು ರಾಯಚೂರಿಗೆ ವರ್ಗವಾಗಿ ಹೊರಟಾಗ, ಸಹೋದರಿಯನ್ನ ಬಿಟ್ಟು ದೂರಕ್ಕೆ ಹೊರಟು ನಿಂತ ಅಣ್ಣನ ಹಾಗಿತ್ತು. ರಾಯಚೂರು, ಹೈದ್ರಾಬಾದ್ ಸುದ್ದಿಗಳನ್ನ ನೋಡಿ ಶಹಬ್ಬಾಷ್ ಕಣೋ ಅಂತ ಕೊಂಡಾಡಿದ್ದಳು. ನನ್ನ ಯಶಸ್ಸನ್ನ ಖುಷಿಯಿಂದ ಸಂಭ್ರಮಿಸಿದ್ದಳು. ಅಂತಹ ಪ್ರೀತಿಯ ಸ್ನೇಹಿತೆ ಈಗ ಆಂಟಿಯಾಗಿದ್ದಾಳೆ. ಅರ್ಥಾತ್ ಮದ್ವೆಯಾಗಿ ವಿನಯರೊಂದಿಗೆ ಹೊಸ ಜೀವನಕ್ಕೆ ಕಾಲಿರಿಸಿದ್ದಾಳೆ. ಅವಳ ಮದುವೆಗೆಂದುಬತಿಂಗಳುಗಟ್ಟಲೇ ಕಾದು, ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾದೆವು ನಾವೆಲ್ಲ. ಸುನಿಲ್ ಶಿರಸಂಗಿ ಸರ್, ದಯಾನಂದ, ಸುಶಿಲ್, ಸಂಗೀತಾ, ಅಮೃತಾ, ಕಿರಣ, ಭಾಗ್ಯ, ಸೀಮಾ, ಸೌಮ್ಯ, ಸುಗಂಧಿ ಎಲ್ಲರೂ ಅವಳ ಮದುವೆಯಲ್ಲಿ ಫೋಸು ಕೊಟ್ಟೆವು. ಜೊತೆಗೆ ನಿಂತಾಗ ಅವಳ ಖುಷಿಗೆ ಪಾರವೇ ಇರಲಿಲ್ಲ. ಜಿನಿ ಜಿನಿ ಸುರಿಯುವ ಮಳೆಯಲ್ಲಿ ಅವಳ ಮದುವೆಯನ್ನ ನಾವೂ ಸಂಭ್ರಮಿಸಿದೆವು. ಈ ಸಂಭ್ರಮ ಅವಳ ಬಾಳಲ್ಲಿ ಹೀಗೆ ಇರಲಿ ಎಂದು ಹಾರೈಸುವೆ....
                                             ಇಂತಿ ನಿನ್ನ ಗೆಳೆಯ ದಶ...

ಭಾನುವಾರ, ಜನವರಿ 1, 2012

ಹಸಿವು ... ಹರಿದ ಚಪ್ಪಲಿ ಮತ್ತು ಸುದ್ದಿ

ನಿಜಾಮನೂರು ಹೈದ್ರಾಬಾದ್‌ಗೂ ನನಗೂ ಭಾರೀ ನಂಟು ಬೆಳೆಯುತ್ತಿದೆ. ಅದು ಮತ್ತೆ ಮತ್ತೆ ನನ್ನ ಸ್ವಾಗತಿಸುತ್ತೆ, ಹೋಗುವ ಕಾರಣ ಏನೇ ಇದ್ರೂ, ಪ್ರತಿ ಬಾರಿಯೂ ವಿಭಿನ್ನವಾದ ಅನುಭವ ನೀಡುತ್ತಿದೆ. ಹೈದ್ರಾಬಾದ್‌ಗೆ ಹೋದ ತಕ್ಷಣ ನೆನಪಾಗೋದು ಅಲ್ಲಿನ ಬಿರ್ಯಾನಿ ಮತ್ತು ಇರಾನಿ ಚಹಾ. ಇವೆರಡನ್ನೂ ಸವಿಯದೇ ಹೋದ್ರೆ ಹೈದ್ರಾಬಾದ್‌ಗೆ ಹೋಗಿದ್ದೇ ದಂಡ ಅನ್ನಿಸಿದರೂ ತಪ್ಪಿಲ್ಲ. ಅದೆಷ್ಟೇ ತುರ್ತು ಸನ್ನಿವೇಶ ಇದ್ರೂ ಒಮ್ಮೆಯಾದ್ರೂ ಇವುಗಳನ್ನ ಸವಿಯದೇ ಹೋದ್ರೆ ಸಮಾಧಾನವೇ ಇರಲ್ಲ. ಹೈದ್ರಾಬಾದ್‌ ಹೈಕೊರ್ಟ್‌ ಮುಂದೆ ಒಂದು ಚಿಕ್ಕ ಟೀ ಸ್ಟಾಲ್, ಪುಟ್‌ಪಾತ್ ಬದಿಯ ಅಂಗಡಿಯಾದ್ರು ಯಾವ ಫೈವ್‌ ಸ್ಟಾರ್‌ ಹೋಟೆಲ್‌ಗೂ ಕಮ್ಮಿಯಿಲ್ಲದಂತೆ ಚಹಾ ಮಾಡ್ತಾನೆ. ಥೇನ್‌ ಮಾರುತಗಳ ಪ್ರಭಾವವೋ ಏನೋ ಅಂದು ಮೋಡ ಮುಸುಕಿದ ವಾತಾವರಣವಿತ್ತು. ತಂಪು ಹೊತ್ತಲಿ ಇರಾನಿ ಚಹಾ ಕುಡಿತಾ ಯಾರ್ಗೋ ಕಾಯ್ತಾ ಕುಳಿತಿದ್ವಿ. ಕಾಯೋದೆ ನಮ್ಮ ಕೆಲಸದ ಭಾಗ ಅಂತಾ ಎಷ್ಟೋ ಬಾರಿ ಅನ್ನಿಸಿದೆ.ಕಾಯಿಸುವವರನ್ನೂ ಯಾರು ಪ್ರೀತಿಸಬಾರದು ಅಂತಾರೆ, ಆದ್ರೆ ನಾವು ಕಾಯಿಸುವವರನ್ನ ದ್ವೇಷಿಸೋಕು ಆಗಲ್ಲ. ಅದರಲ್ಲೂ ಸಿಬಿಐ ಕಚೇರಿ, ಚಂಚಲಗುಡ ಜೈಲು, ಸಿಬಿಐ ಕೋರ್ಟ್‌ ನ ಮುಂದೆ ಕಾಯ್ದಿರೋದು ನನ್ನ ಮಟ್ಟಿಗೆ ಅದೇ ಸಾಹಸವೇ.
...

ಹೀಗೆ ಕಾಯ್ತಾ, ಚಹಾ ಕುಡಿಯುತ್ತಾ ನನ್ನ ದೃಷ್ಠಿ ಅದೇ ಪುಟ್‌ ಪಾತ್‌ ಮೇಲೆ ಕೂತಿದ್ದ ಚಪ್ಪಲಿ ಹೊಲಿಯುವವನ ಮೇಲೆ ಬಿತ್ತು. ಕುತೂಹಲದಿಂದ ಅವನನ್ನೇ ನೋಡ್ತಾಯಿದ್ದೆ. ಹೈಕೋರ್ಟ್‌ ಇದ್ರೂ ಅದು ಚಿಕ್ಕ ರಸ್ತೆ ಆಗಿದ್ರಿಂದ ವಾಹನ ದಟ್ಟಣೆಯೂ ಜಾಸ್ತಿಯಿತ್ತು. ರಸ್ತೆಯ ಮೇಲೆ ಹೋಗುವ ಬರುವ ಪ್ರತಿಯೊಬ್ಬರನ್ನ ನೋಡುತ್ತಾ ಕುಳಿತ್ತಿದ್ದ ಈ ಚಪ್ಪಲಿ ಹೊಲಿಯುವಾತ. ಅದ್ಯಾಕೆ ಹಾಗೆ ಜನರನ್ನ ನೋಡ್ತಾನೆ ಅನ್ನೋ ಕುತೂಹಲದೊಂದಿಗೆ ಸೂಕ್ಷ್ಮವಾಗಿ ಅವನ ಕಣ್ಣುಗಳನ್ನೇ ದಿಟ್ಟಿಸಿದೆ. ಅವನ ಕಣ್ಣಿನಲ್ಲಿ ಹಸಿವನ್ನ ನೀಗಿಸಿಕೊಳ್ಳುವ ಹುಡುಕಾಟ ಇತ್ತು. ಅರ್ಥಾತ್‌ ಆತ ನೋಡ್ತಾಯಿದ್ದಿದ್ದು ಚಪ್ಪಲಿಗಳನ್ನ. ಯಾರದ್ದೋ ಚಪ್ಪಲಿ ಹರಿದಿದ್ರೆ ಅದನ್ನ ಹೊಲಿದು ತನ್ನ ಹೊಟ್ಟೆ ತುಂಬಿಸಿಕೊಳ್ಳುವ ಹಪಾಹಪಿ ಅವನದ್ದು. ಆ ಕ್ಷಣಕ್ಕೆ ಅನ್ನಿಸಿದ್ದು “ ಹರಿದ ಚಪ್ಪಲಿ ಅವನ ಹಸಿವು ನೀಗಿಸುತ್ತೆ, ಹಾರುವ ಸುದ್ದಿ ನಮ್ಮ ಹಸಿವು ನೀಗಿಸುತ್ತೆ” ಅಂತಾ. ನಾವಿಬ್ಬರೂ ಮಾಡಿದ್ದೂ ಒಂದೇ ಅದೇ ಹುಡುಕಾಟ. ಅವನು ಚಪ್ಪಲಿ ಹುಡುಕಿದ, ನಾನು ಸುದ್ದಿ ಹುಡುಕಿದೆ. ಎಲ್ಲಾರು ಮಾಡೋದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಅನ್ನೋ ಹಾಡಿನ ಅರ್ಥಪೂರ್ಣ ಸಾಲುಗಳು ನೆನಪಾಗಿ ನನ್ನೊಳಗೆ ನಾ ನಕ್ಕು ಸುಮ್ಮನೇ ಹುಡುಕಾಟ ಮುಂದುವರೆಸಿದ್ವು. - ದಶರಥ್ ಬಿ ಎಲ್‌‌

ಗುರುವಾರ, ಮೇ 26, 2011

ದಾರಿ ಯಾವುದಯ್ಯ ಜೀವನಕೆ.........?


ಗುಳೆ ಹೊರಟ ಬದುಕಲ್ಲಿ ನಿತ್ಯವೂ ನೆಲೆ ನಿಲ್ಲುವ ತವಕ. ಅವಕಾಶ ಯಾವ ದಿಕ್ಕಿನಿಂದಾದರೂ ಹರಿದು ಬರುವುದೆಂಬ ಸದಾಭಿಲಾಷೆ. ನೂರು ದಾರಿಯುದ್ದಕ್ಕೂ ನಡೆದು ನಡೆದು ಸೋತು ಬಂದಿರುವೆ. ಇನ್ನು ಮೂರು ಹೆಜ್ಜೆ ನಡೆಯಲಾರೆನಾ? ಖಂಡಿತ ಈ ಮೂರು ಮೂರು ಹೆಜ್ಜೆ ಸೇರಿ ನೂರಾಗಿವೆ. ಒಂದು ದಾರಿ ಮತ್ತೊಂದು ದಾರಿಗಿಂತ ವಿಭಿನ್ನ, ವಿಶಿಷ್ಟ. ದಾರಿಯುದ್ದಕ್ಕೂ ನಡೆಯುವಾಗ ಎಷ್ಟೊಂದು ಕಲ್ಲು ಮುಳ್ಳುಗಳು ನನ್ನನ್ನು ನೋಯಿಸಿ ತಾವು ನೊಂದುಕೊಂಡಿವೆ. ಇನ್ನು ಮುಂದಿನ ದಾರಿಗಳಲ್ಲಿಯೂ ಇದು ತಪ್ಪಿದ್ದಲ್ಲ. ಆದರೆ ಹಿಂದಿನ ಕಲ್ಲುಮುಳ್ಳುಗಳು ಈಗ ನೆನಪುಗಳು. ಇವು ಮುಳ್ಳುಗಳ ಬಗ್ಗೆ ಇದ್ದ ಭಯವನ್ನು ದೂರವಾಗಿಸಿವೆ. ಹಾಗೆಂದ ಮಾತ್ರಕ್ಕೆ ಇನ್ನು ನಿರ್ಭಿಡೆಯಿಂದ ಮುನ್ನುಗ್ಗುತ್ತೇನೆಂದು ಹೇಳುವುದು ಕಷ್ಟವೇ. ಯಾಕೆಂದರೆ ಈ ಮುಳ್ಳುಗಳಲ್ಲಿ ಅನೇಕ ವಿಧ. ಕೆಲವು ನೇರವಾಗಿ ಘಾಸಿಗೊಳಿಸಿದರೆ ಇನ್ನು ಕೆಲವು ವಿಚಿತ್ರ ಮತ್ತು ವಿಕೃತ ಮುಳ್ಳುಗಳಿರುತ್ತವೆ. ಒಂಥರಾ ಬಾರೆಮುಳ್ಳಿನಂತೆ ಹಿತ್ತಲ ಬಾಗಿಲಿನಿಂದಲೇ ಇರಿದುಬಿಡುತ್ತವೆ.


ಈ ಇರಿತ ಮೊರೆತ ಆ ಕ್ಷಣಕ್ಕೆ ನೋವು ಕೊಟ್ಟರೂ ಪ್ರತಿಯೊಂದು ಒಂದೊಂದು ಪಾಠ ಕಲಿಸಿಹೋಗುತ್ತವೆ. ಅದರಲ್ಲಿ ಮೊದಲ ಪ್ರಭೇದ ಅಡ್ಡದಾರಿ ತುಳಿಯದಿರು, ತಪ್ಪು ಹೆಜ್ಜೆ ಇಟ್ಟರೆ ನೋವೆ ಗತಿ ಎಂದು ಎಚ್ಚರಿಸುತ್ತದೆ. ಎರಡನೇ ಪ್ರಭೇದ ಇದು ಒಂಥರಾ ಎಡಬಿಡಂಗಿ ಹಾಗೂ ಎಡವಟ್ಟು ಕೊಂಕು ಮುಳ್ಳು. ಇದನ್ನು ನೋಡಿದ್ರೆ ಇದರ ಬಗ್ಗೆ ಭಯ ಉಂಟಾಗುವುದೆ ಇಲ್ಲ. ಅದೇನು ಮಾಡೀತು ಎಂಬ ನಿರ್ಲಕ್ಷ್ಯಮೂಡುತ್ತದೆ. ಎಂಥ ಸಂಧರ್ಭ ಬಂದರೂ ಇದು ತನ್ನ ಸ್ವಭಾವ, ಗುಣ ತೋರ್ಪಡಿಸುವುದಿಲ್ಲ. ಅವಕಾಶಕ್ಕೆ ಹೊಂಚು ಹಾಕಿ ಕುಳಿತು ಘಾಸಿಗೊಳಿಸುತ್ತದೆ. ನಂಜು ತುಂಬಿದ ಈ ಎರಡು ತಲೆ ಹಾವಿನ ಗುಣವುಳ್ಳವರು ಎಲ್ಲಾ ದಾರಿಗಳಲ್ಲಿಯೂ ಸಹಜ ಮತ್ತು ಸರ್ವಕಾಲಿಕ. ರಕ್ತಬಿಜಾಸುರನಂತೆ ತಾನಳಿದರೂ ತನ್ನಂತಹ ಸಂತತಿಯನ್ನು ಬಿಟ್ಟು ಹೋಗುತ್ತಾರೆ. ಮಲಗಿದ ಸರ್ಪವನ್ನುಕೆಣಕಬಹುದು , ನಗುವ ಸೋಗು ಧರಿಸಿದ ಇಂತಹವರನ್ನು ನಂಬಲು ಸಾಧ್ಯವಿಲ್ಲ.

ಆದರೂ ನನಗೆಲ್ಲವೂ ಗೊತ್ತು, ಮುಳ್ಳುಗಳ ಇತಿಹಾಸ , ಸ್ವಭಾವ, ಕುಹಕಗಳ ತಲೆ ಬುಡ ಗೊತ್ತು ಎಂದು ಬೀಗಿದವರೇ ಇದಕ್ಕೆ ಬಲಿಯಾಗುತ್ತಿರುವುದೇ ವಿಪರ್ಯಾಸ ಮತ್ತು ಬೇಸರದ ಸಂಗತಿ. ಗೊತ್ತಿದ್ದರೂ ಮುಳ್ಳಿನ ರಾಶಿಯನ್ನೆ ಕಿರೀಟದಂತೆ ತಲೆ ಮೇಲೆ ಹೊತ್ತು ತಿರುಗುತ್ತಾರೆ. ಕಿರೀಟವೇ ಇವರ ಕೊರಳಿಗೆ ಉರುಲು ಅಂತ ಗೊತ್ತಾಗುವ ವೇಳೆಗೆ ಅದರ ವಿರುದ್ಧ ಪ್ರತಿಭಟಿಸುವ, ಅದನ್ನು ಕಿತ್ತುಹಾಕುವ ಶಕ್ತಿ ಕುಂದಿಹೋಗಿರುತ್ತದೆ. ಅಷ್ಟರ ಮಟ್ಟಿಗೆ ಜರ್ಜರಿತಗೊಳಿಸಿರುತ್ತದೆ.


ಈ ದಾರಿಯಲ್ಲಿ ಇನ್ನೂ ಮುನ್ನಡೆಯಲಾರೆ, ಈ ಕೊಳಕು ಮುಳ್ಳುಗಳ ಸಹವಾಸ ಮತ್ತೆ ಮಾಡಲಾರೆ , ಈ ಅರ್ಧದಾರಿಯಲ್ಲೇ ಹಿಂದುರಿಗಿದರೂ ತೊಂದರೆ ಇಲ್ಲ ಅಥವಾ ಇದ್ದಲ್ಲೇ ಇರುವೆ ಎಂದರೂ ಇವು ಬಿಡವು. ಜೇಡರ ಬಲೆಯಂತೆ ಮುಳ್ಳಿನ ಬಲೆಯಿಂದ ಹೆಕ್ಕಿ ಹೊರಹಾಕುತ್ತವೆ.
ಇಲ್ಲಿ ಬದುಕಬೇಕಾದರೆ ಮುಳ್ಳುಗಳ ಸರ್ವನಾಶ ಮಾಡಬೇಕು ಇಲ್ಲವಾದರೆ ನಾವೇ ಸಂಪೂರ್ಣ ಶರಣಾಗಬೇಕು. ಇದೆಲ್ಲಾ ಸಾಧ್ಯವಾಗುವುದು ಈಗಂತೂ ಸಾಧ್ಯವಿಲ್ಲ. ಹಾಗಾದರೆ ದಾರಿ ಯಾವುದಯ್ಯ ಜೀವನಕೆ.........? `

ಶನಿವಾರ, ಫೆಬ್ರವರಿ 12, 2011

ಹೀಗೇಕೆ....?

ನನ್ನನ್ನು ಸದಾ ಯೋಚಿಸುವಂತೆ ಮಾಡುವ, ಬೆಂಬಿಡದೆ ಭೂತದಂತೆ ಕಾಡುವ ಸಹಸ್ರ ಪ್ರಶ್ನೆಗಳ ನನ್ನಲ್ಲಿವೆ. ಇದಕ್ಕೆ ಸೂಕ್ತವಾದ ಉತ್ತರವೂ ನನ್ನ ಬಳಿ ಇದೆ. ಆದ್ರೂ ಯಾಕೆ ತೃಪ್ತಿ-ಸಮಾಧಾನಗಳೆಂಬ ಶಬ್ಧಗಳು ನನ್ನ ಬಳಿ ಸುಳಿಯುತ್ತಿಲ್ಲ.

ಸೋಮವಾರ, ಜನವರಿ 10, 2011

ಹಾರಿ ಹೋದ ಚಿಟ್ಟೆಯೇ ನಿನ್ನ ಮನದಲಿ ಏನಿತ್ತೆ.....?

ನಿನ್ನಿಂದ ದೂರ ಆಗೋ ದಿನ ಬಂದ್ರೆ ಸತ್ತೆ ಹೋಗ್ತಿನಿ. ನಿನ್ನ ಬಿಟ್ಟು ಬದುಕಿದ್ರೆ ಅದು ಬದುಕಲ್ಲ, ಬದುಕಿದ್ದು ಶವ ಆಗ್ಬಿಡ್ತಿನಿ. ನೀನು ನನ್ನ ಪ್ರಾಣ, ನನ್ ಉಸಿರು, ನನ್ ಮಿಡಿತ ಹೃದಯ ಬಡಿತ ಕೂಡ. ನೀನ್ ನಕ್ರೆ ನಾನ್ ನಗ್ತಿನಿ, ನೀನ್ ಅತ್ರೆ ನಾನೂ ಅಳ್ತಿನಿ. ನೀನು ನನ್ನ ಪಾಲಿನ ಸ್ವರ್ಗ. ಈ ಪ್ರಪಂಚದ ಯಾವುದೇ ಕಾಡಿನ ಯಾವುದೇ ಮೂಲೆಯಲ್ಲಾದ್ರೂ ಸಂತೋಷದಿಂದ ಇರ್ತೀನಿ ಆದ್ರೆ ನನ್ಜೊತೆ ನೀನಿರ್ಬೇಕು. ಎಂಥ ಮೋಡಿ ಮಾಡ್ಬಿಟ್ಟೆ ನೀನು.. ಪ್ರತಿ ಪ್ರೇಮ ಗೀತೆಯಲ್ಲೂ ನೀನೆ, ಭಾವಗೀತೆಗೆ ಭಾವ ನೀನೆ... ಅಬ್ಬಾ ಇನ್ನು ಏನು ಹೇಳಲ್ಲ ಸಾಕು ಸಾವಿರ ಜನ್ಮಕ್ಕೂ ನಿನ್ನ ಪ್ರೀತಿಯೇ  ಸರಕು ನಂಗೆ.

ಅಯ್ಯೋ ದಶರಥ ಏನಾಯ್ತೋ ನಿಂಗೆ ? ಬೆಳಿಗ್ಗೆ ತಾನೆ ಚೆನ್ನಾಗಿದ್ದೆ, ಯಾಕ್ಹೀಗೆ ಏನೆನೋ ಬರಿತಿದಿಯಾ? ನಿನಗೂ ಲವ್ವು ಗಿವ್ವು ಶುರುವಾಯ್ತಾ ಹೆಂಗೆ? ಅನ್ನೊ ಪ್ರಶ್ನೆ ಬಂದಿರ್ಬೇಕಲ್ಲಾ. Yes ಪ್ರೀತಿ ಬಂದಿರೊದು ನಿಜ But ಪ್ರೀತಿ ಬಂದಿರೋದು ಪ್ರೀತಿ ಬಗ್ಗೆ ಬರಿಯೋಕೆ. ಅದು ಅಲ್ದೆ ನನ್ನ ಸ್ನೇಹಿತೆಗೆ ಮಾತು ಕೂಡ ಕೊಟ್ಟಿದ್ದೆ ಪ್ರೀತಿ ಬಗ್ಗೆ ಬರಿತೀನಿ ಅಂತ. ಬರೆಯೋದಂತು ಬರ್ದಿದಿನಿ ಇನ್ನು ಓದೋದು ನಿಮ್ಮ ಕರ್ಮ.
All right...!!!
ಪ್ರೀತಿ ನಿಜವಾಗಿಯೂ ಒಂದು ಸುಂದರ ಅನುಭವ, ಎರಡು ಮನಸುಗಳನ್ನು ಬೆಸೆಯುವ ಧೀಶಕ್ತಿ. ಜಾತಿ, ಮತ, ಮೇಲು-ಕೀಳು, ಬಣ್ಣ ಯಾವುದು ಇದಕ್ಕೆ ಬೇಕಿಲ್ಲ. ಪರಸ್ಪರ ಪ್ರೀತಿಸುವ ಎರಡು ಕಲ್ಮಶ ಹೃದಯಗಳಿದ್ದರೆ ಸಾಕು. ಮೇಲಿನ ಸಂಭಾಷಣೆ ಕೇಳಿದ್ರೆ ಯಾವ ಋಷಿ ಮುನಿ ಕೂಡ ಪ್ರೀತಿಗೆ ಸೋಲದೆ ವಿಧಿಯಿಲ್ಲ. ಹೀಗೆ ಸೋತು ಪ್ರೇಮಲೋಕದಲ್ಲಿ ವಿಹರಿಸೋ ಅದೆಷ್ಟೊ ಮನಸುಗಳು ನಮ್ಮ ಮುಂದಿವೆ. ಪರಸ್ಪರ ಪ್ರೀತಿಸ್ತಾ, ಜೊತೆಯಲೇ ಬಾಳೊ ಕನಸು ಕಾಣ್ತಾ ಇದ್ದಾರೆ. ಆಣೆ-ಭಾಷೆಗಳಂತೂ ಸಾವಿರಾರು.

ಪ್ರೀತಿಗೆ ಪ್ರತಿಯಾಗಿ ಕೊಡಬಹುದ್ದಾಗಿದ್ದರೆ ಅದು ಪ್ರೀತಿ ಮಾತ್ರ. ಅದಕ್ಕೆ "ಒಲವಿನ ಪೂಜೆಗೆ  ಒಲವೇ ಮಂದಾರ" ಅನ್ನೊದು ಅರ್ಥಪೂರ್ಣ ಅನ್ನಿಸುತ್ತೆ. ಯಾವುದು ಹೆಚ್ಚು ಖುಷಿ ಕೊಡುತ್ತೋ ಅದೇ ಹೆಚ್ಚು ನೊವನ್ನು ಕೊಡುತ್ತೆ ಅನ್ನೋದಕ್ಕೆ ಈ ಪ್ರೀತಿಯೂ ಹೊರತಾಗಿಲ್ಲ. Love is slow poison ನಿಜ ಆದ್ರೆ ಎಲ್ಲವೂ ನಮ್ಮ ಮನಸ್ಥಿತಿಯ ಮೇಲೆ ನಿರ್ಧರಿತವಾಗುತ್ತೆ. ಯಾವುದೋ ಕಾರಣ, ಮತ್ಯಾರದ್ದೋ ಹಿತಕ್ಕೋಸ್ಕರ ಪ್ರೇಮಿಗಳು ದೂರಾಗಬಹುದು. ದೂರವಾಗಿದ್ದಾರೆ ಕೂಡ. ಕೆಲವರು ಹತಾಶರಾಗಿ ನಂತರ ಅದ್ರ ಹಿಂದಿರುವ ಸದುದ್ದೇಶವನ್ನು  ಅರಿತು ಚೇತರಿಸಿಕೊಂಡಿದ್ದಾರೆ. ಇನ್ನು ಕೆಲವರು ತೀವ್ರ ಹತಾಶೆಯಿಂದ ಪ್ರಾಣ ಕಳೆದುಕೊಂಡದ್ದಾರೆ. ಕೆಲವರಂತೂ ಜೀವಂತ ಶವವಾಗಿದ್ದಾರೆ.

ಪ್ರತಿಯೊಂದು ಮಾನವ ಸಂಬಂಧಗಳಿಗೆ ನಂಬಿಕೆಯೇ ಆಧಾರ. ಪ್ರೀತಿಯು ನಿಂತಿರುವುದು ನಂಬಿಕೆಯ ಮೇಲೆಯೇ. ನಿಜವಾಗಿ ಪ್ರೀತಿಸಿದ್ದೇ ಆದ್ರೆ ಅವನನ್ನ ನಂಬಿರಲೇಬೇಕು. ನಂಬಿದ್ದೆ ನಿಜ ಆದ್ರೆ ಅವನು ದೂರಾಗುವ ಕಾರಣವನ್ನು ನಂಬಲೇಬೇಕು. ಕಾರಣವಿರದೆ ಯಾವುದೇ ಮಾನವ ಸಂಬಂಧಗಳಿಗೆ ಅಂತ್ಯ ಇಲ್ಲ. ಇದಕ್ಕೆ ನನ್ನ ಟೈಟಲ್ ಸೂಕ್ತ ಉತ್ತರ ಹುಡುಕುತ್ತೆ. ಹಾರಿ ಹೋಗುವ ಚಿಟ್ಟೆಯೇ ನಿನ್ನ ಮನದಲಿ ಏನಿತ್ತೇ..? ಹಾರಿ ಹೋಗುವ ಚಿಟ್ಟೆಯನ್ನು ದೂಷಿಸುವವರೇ ಎಲ್ಲ, ಆದ್ರೆ ಆ ಚಿಟ್ಟೆಗೂ ಒಂದು ಪುಟ್ಟ ಹೃದಯ ಇರುತ್ತೆ, ಅದಕ್ಕೂ ಭಾವನೆಗಳಿರುತ್ತೆ, ಬೆಟ್ಟದಷ್ಟು ಪ್ರೀತಿ ಇರುತ್ತೆ. ಪ್ರೀತಿಯನ್ನು ಮರೆಯುವಾಗ ನೋವು ಕೂಡ ಕಾಡುತ್ತೆ. ಚಿಟ್ಟೆ ಬಹಿರಂಗದ ಬಣ್ಣ ಮಾತ್ರ ತೋರಿಸುತ್ತೆ ಅಂತರಂಗವನ್ನು ನಾವೇ ಅರಿಯಬೇಕು. ಚಿಟ್ಟೆಯ ಮನದಲ್ಲಿರುವುದನ್ನು ಒಪ್ಪಿಕೊಂಡು ನೀವು ಒಂದು ಸ್ವತಂತ್ರ ಚಿಟ್ಟೆಯಾಗಿ ವಿಶಾಲವಾದ ಮುಗಿಲೆತ್ತರಕ್ಕೆ ಹಾರಿ. ಚಿಟ್ಟೆ ಬಣ್ಣದಿಂದಲೇ ಎಲ್ಲವನ್ನು ಮರೆಯುವ ಹಾಗೆ ನೀವು ನಿಮ್ಮ ನಗುವಿನಿಂದಲೇ ಎಲ್ಲವನ್ನು ಮರೆಯಬೇಕು.


         ನೊಂದ ಹೃದಯಗಳಿಗೆ ನನದೊಂದು ನಿವೇದನೆ
               ನಗ್ತಾ ಇರಿ.. ನಿಮ್ಮ ನಗುವನ್ನು ನೋಡಿ ನೋವೇ ನಾಚಬೇಕು.
                              Keep smiling
                             ಇಂತಿ ನಿಮ್ಮವನು...
                              ದಶರಥ್.ಬಿ.ಎಲ್

ಶುಕ್ರವಾರ, ಅಕ್ಟೋಬರ್ 15, 2010

ನೆನಪೆಂಬ ಕತ್ತಿಯ ಅಲಗು ಮತ್ತು ಚಂದ್ರ.......

ಸೂರ್ಯ ಉರಿದು ಬೂದಿಯಾಗುವ ಭೀತಿಯಲ್ಲಿ ಮೋಡದ ಮಡಿಲಿಗೆ ಸೇರುವನು. ಮರೆಯದೇ ಸೂರ್ಯ ಮತ್ತೆ ಬರುವ ಕುರುಹುವಿಗೆ ಮುಸುಕು, ಮಬ್ಬುಗತ್ತಲು.ನಾನಿದ್ದೇನೆ ಎಂಬ ಚಂದ್ರನ ಇನಿದನಿ. ತಂಗಾಳಿ ತಂಪನ್ನೆರೆದು, ಬಾನಗಲ ಚಾಚಿಕೊಂಡು ಚೆಲುವೆಯರ ಮನಕದ್ದು ಹೊಳೆಯುತಲೇ "ನನ್ನ ಮನದ ದುಗುಡ,ದುಮ್ಮಾನ,ಏಕಾಂಗಿತನಕ್ಕೆ ಕಿಚ್ಚು ಹೊತ್ತಿಸುವವನೂ ಅವನೇ ಆ ಕಳ್ಳಚಂದಮಾಮ".
ಚಂದ್ರ ಬಂದಾಕ್ಷಣ ನನಗರಿವಿಲ್ಲದಂತೆ ಎಲ್ಲೆಲ್ಲೋ ವಿಹರಿಸೋ ಮನ, ಎನನ್ನೋ ಹುಡುಕುತಿರುವ ನನ್ನ ಕಣ್ಣನೋಟದ ಕಾವಿಗೆ ಕೊನೆಗೇನು ಕಾಣದೆ ನೋ ವೇ (No way)ನೋವೆ ಅಂತ ರೆಪ್ಪೆಗಳು ನಿರಾಳವಾಗುತ್ತವೆ.

ಯಾಕೆ ಹೀಗೆ ಮನಸ್ಸು ಕಾರಣವಿಲ್ಲದೆ ತನ್ನ ಖಯಾಲಿ ಶುರುಮಾಡುತ್ತದೋ, ಮನಸ್ಸು ಮಗುವಿನಂತೆ ಆದ್ರೆ ಮನಸೇ ಮಗುವಾಗಿದ್ದರೆ...? ಮಗುವಲ್ಲ ಇದು ನಗುವನ್ನು ನುಂಗೋ ಜಂಗು ಹಿಡಿದ ಅಲಗು.
ಕ್ಲಿಷ್ಟ,ಜಟಿಲ,ಉಸಿರುಗಟ್ಟಿಸುವ ಜಿಜ್ಙಾಸೆಯಿಂದ ರೋಸಿ ಹೋಗಿರುವ ಮನ ಮಂತ್ರಾಲಯಕ್ಕೆ, ಯಾವ ಮಾಮರದಿಂದ ತಂಗಾಳಿ ಅಪ್ಪಳಿಸುವುದೋ ನಾ ಕಾಣೆ.

ಸೂರ್ಯ ತನ್ನ ಒಡಲಲ್ಲಿ ಬೆಂಕಿಯ ಉಂಡೆಯನ್ನು ಉದರದಲ್ಲಿಟ್ಟುಕೊಂಡು ಸುಡುತ್ತಿರೋ , ಸುಡುತ್ತಾ ಬೆಳಗುತ್ತಿರೋ ದಿನಕರ,ಶುಭಕರ ಎನ್ನುವುದು ಜಗಜ್ಜಾಹಿರು.ಆದ್ರೆ ನನಗಂತೂ ಬೆಂಕಿ ಕಾಣೋದು ಸೂರ್ಯನಲ್ಲಿ ಅಲ್ಲ. ಹಾಲಿನ ನೊರೆಯಂತೆ ತೀಡಿರುವ ಗಂಧದಂತೆ ಹಾಗೆ ಸುಮ್ಮನೆ ಅಂತ ನಗ್ತಾ ಇರೋ ಚಂದ್ರನಲ್ಲಿ.ಅದಕ್ಕಾಗಿಯೇ ಏನು ನನ್ನ ಮನ "ಚಂದಮಾಮನೇ ನೀನಂದ್ರೆ ನಂಗಿಷ್ಟ, ನೀ ಭಾವನೆಗಳ ಗುಚ್ಛ, ಎಲ್ಲೋ ಮಗ್ನ್ರನಾಗಿರೋ ನಾನು ನಿನ್ನೊಮ್ಮೆ ನೋಡಿದ್ರೆ ಸಾಕು ಭಾವಾಂತರಂಗದಲ್ಲಿ ಅಲ್ಲೋಲ ಕಲ್ಲೋಲ" ಅಂತ ಪಿಸುಗುಡುತ್ತದೆ.ಹೌದು ಯಾವುದೋ ಮರೆತಿರುವ ನೆನಪು, ಕರಗಿರುವ ಕನಸು ಝಲ್ಲನೆ ಎದೆಗೆ ರಾಚುತ್ತದೆ. ಬಿಡದೆ ಕಾಡುತ್ತದೆ, ಚೂಪಾದ ನೆನಪುಗಳಿಂದ ಮನಸ್ಸನ್ನು ಚೂರಾಗಿಸುತ್ತದೆ ಆದ್ರೂ ನೆನಪು ರಕ್ತ ಬೀಜಾಸುರ.

ಸಾಕಪ್ಪಾ.... ಸಾಕು!! ಈ ಚಂದ್ರನೂ ಬೇಡ, ಅವನಿಂದ ಮನಸಿಗಾಗುವ ರಂಧ್ರವೂ ಬೇಡ ಅಂತ ರಕ್ತಬೀಜಾಸುರವಾದ ನೆನಪನ್ನೆ ಹಾಸಿ- ಹೊದ್ದು ಮಲಗಿದರೆ, ಕನಸೆಂಬ ಕನ್ನಡಿಯಲ್ಲಿ ಕಾಣುವ ಗಂಟನ್ನು ಹುಡುಕುತ ನಿರಾಳ....
ನೆನಪೆಲ್ಲವೂ ಕನಸಾಗಿ ರಾತ್ರಿಯೀಡೀ ಗುಯ್ಯಿಗುಡುತ್ತದೆ. ಮುಂಜಾನೆ ಎದ್ದೆಳೋ ಮುನ್ನವೇ ನಾ ಬಂದೆ ಖುಷಿಯಾಗಿರು ಎಂಬ ಎಳೆ ಸೂರ್ಯನ ಆಶ್ವಾಸನೆಯೊಂದಿಗೆ ದಿನ ಆರಂಭ. ಆದರೂ ಬಿಡದೇ ಕಾಡುವ ನೆನಪಿಗೆ ಕೊನೆ ಎಲ್ಲಿ,,,,,,,,